ನವದೆಹಲಿ: ಸುಪ್ರೀಂಕೋರ್ಟ್ ನ ಚೀಫ್ ಜಸ್ಟೀಸ್ ಆಫ್ ಇಂಡಿಯಾ (Chief Justice of india) ಡಿ.ವೈ.ಚಂದ್ರಚೂಡ್ ಅವರು ನ.8ರಂದು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಸುಪ್ರೀಂಕೋರ್ಟ್ ನ ಹಿರಿಯ ಜಡ್ಜ್ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿಯಮಾವಳಿ ಪ್ರಕಾರ, ನಿರ್ಗಮಿತ ಸಿಜೆಐ ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡಿ ಕಳುಹಿಸುವಂತೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು. ಸಿಜೆಐ ಡಿವೈ ಚಂದ್ರಚೂಡ್ ಅವರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ನವೆಂಬರ್ 8ರಂದು ನಿವೃತ್ತಿಯಾಗಲಿದ್ದಾರೆ.
ಕೇಂದ್ರ ಸರ್ಕಾರ ಸಂಜೀವ್ ಖನ್ನಾ ಹೆಸರನ್ನು ಅನುಮೋದಿಸಿದ ನಂತರ ಸುಪ್ರೀಂಕೋರ್ಟ್ ನ 51ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೇವಲ ಆರು ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲಿರುವ ಖನ್ನಾ ಅವರು 2025ರ ಮೇ 13ರಂದು ನಿವೃತ್ತಿಯಾಗಲಿದ್ದಾರೆ.
ಯಾರಿವರು ಜಸ್ಟೀಸ್ ಸಂಜೀವ್ ಖನ್ನಾ?
1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ ನಲ್ಲಿ ಸಂಜೀವ್ ಖನ್ನಾ ಅವರು ವಕೀಲರಾಗಿ ಸೇರಿಕೊಂಡಿದ್ದರು. ನಂತರ ತೀಸ್ ಹಜಾರಿ ಜಿಲ್ಲಾ ಕೋರ್ಟ್ ಗಳಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಬಳಿಕ ದೆಹಲಿ ಹೈಕೋರ್ಟ್ ಮತ್ತು ಟ್ರಿಬ್ಯೂನಲ್ಸ್ ನಲ್ಲಿ ವಕೀಲರಾಗಿದ್ದರು.
ಜಸ್ಟೀಸ್ ಖನ್ನಾ ಅವರು ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ದೆಹಲಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿಯ ಸ್ಥಾಯಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು.
ಜಸ್ಟೀಸ್ ಖನ್ನಾ ಅವರು ದೆಹಲಿ ಹೈಕೋರ್ಟ್ ನ ಕ್ರಿಮಿನಲ್ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಹಾಗೂ ಅಡಿಷನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಹಾಜರಾಗುತ್ತಿದ್ದರು. 2005ರಲ್ಲಿ ದೆಹಲಿ ಹೈಕೋರ್ಟ್ ನ ಹೆಚ್ಚುವರಿ ಜಡ್ಜ್ ಆಗಿದ್ದು, 2006ರಲ್ಲಿ ಖಾಯಂಮಾತಿ ಪಡೆದಿದ್ದರು.
ಜಸ್ಟೀಸ್ ಖನ್ನಾ ಅವರು ದೆಹಲಿ ಜ್ಯುಡಿಶಿಯಲ್ ಅಕಾಡೆಮಿಯ ಅಧ್ಯಕ್ಷರಾಗಿ, ದೆಹಲಿ ಇಂಟರ್ ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ ನ ಜಡ್ಜ್ ಇನ್ ಚಾರ್ಜ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
2019ರ ಜನವರಿ 18ರಂದು ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್ ಜಡ್ಜ್ ಆಗಿ ಪದೋನ್ನತಿ ಪಡೆದಿದ್ದರು. ಆರ್ಟಿಕಲ್ 370 ರದ್ದು, ಚುನಾವಣಾ ಬಾಂಡ್ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದಲ್ಲಿಯೂ ಜಸ್ಟೀಸ್ ಖನ್ನಾ ಮಹತ್ವದ ಪಾತ್ರ ವಹಿಸಿದ್ದರು.