Advertisement

ಸುಪ್ರೀಂ ಕೋರ್ಟ್‌ ಆದೇಶ ಪಾಲನೆ: ಹೆದ್ದಾರಿ ಬದಿ ಇನ್ನು  ಮದ್ಯ ಸಿಗದು

03:45 AM Jul 01, 2017 | Team Udayavani |

ಕಾಪು: ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಹೆದ್ದಾರಿ ಬದಿಯ ಮದ್ಯದಂಗಡಿಗಳಿಗೆ ಅಧಿಕೃತ ಬೀಗಮುದ್ರೆ ಬೀಳಲಿದ್ದು, ಮುದ್ರೆ ಜಡಿಯಲು ಅಬಕಾರಿ ಇಲಾಖೆ ಸಿದ್ಧವಾಗಿದೆ.

Advertisement

ಕೋರ್ಟ್‌ ನಿಗದಿ ಪಡಿಸಿದ ಜನಸಂಖ್ಯೆಯ ಆಧಾರದಲ್ಲಿ ರಾ. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಕ್ರಮವಾಗಿ 220 ಮೀ. ಮತ್ತು 500 ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್‌ ಮತ್ತು ವೈನ್‌ಶಾಪ್‌ಗ್ಳನ್ನು ಜೂ. 30ರೊಳಗೆ ತೆರವುಗೊಳಿಸಲು ಸರಕಾರ ಅಬಕಾರಿ ಇಲಾಖೆಯ ಮೂಲಕ ಆದೇಶ ಹೊರಡಿಸಿತ್ತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ರಾ. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿರುವ ಸುಮಾರು 500ರಷ್ಟು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಬಾರ್‌ ಆ್ಯಂಡ್‌ ಲಾಡಿjಂಗ್‌ ಮತ್ತು ವೈನ್‌ಶಾಪ್‌ಗ್ಳ ಸಹಿತವಾಗಿ ಮದ್ಯದಂಗಡಿಗಳು ಜೂ. 30ರಮಧ್ಯರಾತ್ರಿಯಿಂದಲೇ ಮದ್ಯ ಮಾರಾಟ ಚಟುವಟಿಕೆ ಯನ್ನು ಸ್ಥಗಿತಗೊಳಿಸಿವೆ.

ಅಧಿಕೃತ ಮಾಹಿತಿಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿ  230 ಮದ್ಯದಂಗಡಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ. 30 ಸಂಜೆ ವರೆಗೆ ಗುರುತಿಸಲಾಗಿರುವಂತೆ  173 ಮದ್ಯದಂಗಡಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಲಿವೆ.

ಮದ್ಯದಂಗಡಿ, ಬಾರ್‌, ವೈನ್‌ಶಾಪ್‌ಗ್ಳು ಮುಚ್ಚುವುದರಿಂದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಬಾರ್‌ ಆ್ಯಂಡ್‌ ಲಾಡಿjಂಗ್‌ಗಳಿಗೆ ಗಿರಾಕಿಗಳ ಕೊರತೆಯೂ ಕಾಡಲಿದ್ದು, ಅದರ ಜತೆಗೆ ಅಲ್ಲಿಗೆ ಮೀನು, ಮಾಂಸ, ಕೋಳಿ, ತರಕಾರಿ, ಆಹಾರ ಸಾಮಗ್ರಿ, ನೀರು ಸೇರಿದಂತೆ ಇತರ ವಸ್ತುಗಳನ್ನು ಪೂರೈಕೆ ಮಾಡುವವರಿಗೂ ಇದರಿಂದ ನಷ್ಟ ತಪ್ಪಿದ್ದಲ್ಲ.

Advertisement

ಸ್ಥಳಾಂತರಿಸಲು ಕೆಲವೆಡೆ ಆಕ್ಷೇಪ 
ಸುಪ್ರೀಂ ಕೋರ್ಟ್‌ ಸೂಚನೆಯಂತೆ ಅಬಕಾರಿ ಇಲಾಖೆ ಸಿಎಲ್‌-9, ಸಿಎಲ್‌-2 ಲೈಸನ್ಸ್‌ ಹೊಂದಿರುವ ಮದ್ಯದಂಗಡಿಗಳನ್ನು ಗ್ರಾ.ಪಂ. ವ್ಯಾಪ್ತಿಯಾದರೆ ಹೆದ್ದಾರಿ ರಸ್ತೆಗಿಂತ 220 ಮೀಟರ್‌ ಮತ್ತು ಪುರಸಭೆ / ನಗರಸಭೆ ವ್ಯಾಪ್ತಿಯಾದರೆ 500 ಮೀಟರ್‌ ದೂರದಲ್ಲಿ ಸ್ಥಳೀಯರ ಆಕ್ಷೇಪಣೆ ಇರದೇ ಇದ್ದಲ್ಲಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದೆ. ಆದರೆ ಬಹುತೇಕ ಕಡೆಗಳಲ್ಲಿ ಮದ್ಯದಂಗಡಿ ಗ್ರಾಮೀಣ ಪ್ರದೇಶಕ್ಕೆ ಬರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆಗೆ ಬ್ರೇಕ್‌ ಬೀಳುವಂತಾಗಿದೆ.

ಕಾರ್ಮಿಕರ ಪಾಡು ಮುಂದೇನು ?
ಹೆದ್ದಾರಿ ಪಕ್ಕದ ಬಾರ್‌ ಮತ್ತು ವೈನ್‌ಶಾಪ್‌ಗ್ಳು ಮುಚ್ಚುತ್ತಿರುವುದರಿಂದ ಮಾಲಕರಿಂದ ಕಾರ್ಮಿಕರಿಗೇ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಅನಕ್ಷರಸ್ಥ ನೌಕರರು ಮುಂದೆ ಕೆಲಸವಿಲ್ಲದೆ ಅವರ ಕುಟುಂಬಗಳು ಜೀವ ನೋಪಾಯಕ್ಕಾಗಿ ಪರದಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಕಾರ್ಮಿಕರು ಮುಂದೇನು ಎಂದು ಯೋಚಿಸುವಂತಾಗಿದೆ ಎಂದು ಕಾಪು ಮಯೂರ ಹೊಟೇಲ್‌ನ ಸಿಬಂದಿ ಶೇಖರ್‌ ಪೂಜಾರಿ ಹೇಳಿದ್ದಾರೆ.

ನಮ್ಮ ನಷ್ಟಕ್ಕೆ ಹೊಣೆ ಯಾರು ?
ಬಾರ್‌ಗಳು ಬಂದ್‌ ಆಗುವುದರಿಂದ ಹಲವು ವರ್ಷಗಳಿಂದ ನಾವು ನಡೆಸಿಕೊಂಡು ಬರುತ್ತಿರುವ ಉದ್ಯಮ / ವ್ಯವಹಾರಕ್ಕೆ ಕಂಟಕ ಎದುರಾಗಿದೆ. ನಾವು ಸಾಲ -ಸೋಲ ಮಾಡಿ ಬಾರ್‌ಗಳನ್ನು ನಿರ್ವಹಣೆ ಮಾಡುತ್ತಿದ್ದು,ಮದ್ಯ ಮಾರಾಟ ವ್ಯವಹಾರವೇ ನಮ್ಮ ಆದಾಯದ ಮೂಲ ವಾಗಿತ್ತು. ಬಾರ್‌ಗಳನ್ನೇ ನಂಬಿ ನಾವು ಜೀವನ ಸಾಗಿಸುತ್ತಿದ್ದು, ನಮಗೆ ಮುಂದೆ ಎದುರಾಗ ಬಹುದಾದ ತೊಂದರೆಗಳಿಗೆ ಹೊಣೆ ಯಾರು? ಎಂದು ಪ್ರಶ್ನಿಸುತ್ತಾರೆ ಕಟಪಾಡಿ ಸುವರ್ಣ ವೈನ್ಸ್‌ನ ಮಾಲಕ ದೀಪಕ್‌ ಕುಮಾರ್‌ ಮತ್ತು ವೈಶಾಲಿ ಬಾರ್‌ನ ಮಾಲಕ ನಯೇಶ್‌ ಶೆಟ್ಟಿ ಅವರು. 

Advertisement

Udayavani is now on Telegram. Click here to join our channel and stay updated with the latest news.

Next