ಹೊಸದಿಲ್ಲಿ : ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಷ್ಟ್ರೀಯ ವಿಕೋಪ ನಿರ್ವಹಣ ಪ್ರಾಧಿಕಾರದ ಅಡಿಯಲ್ಲಿ ಪರಿಹಾರ ನೀಡುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಇದಕ್ಕಾಗಿ ಆರು ವಾರಗಳಲ್ಲಿ ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಂ.ಆರ್. ಶಾ ಅವರ ನೇತೃತ್ವದ ವಿಶೇಷ ಪೀಠ ಈ ಸಂಬಂಧ ವಿಚಾರಣೆ ನಡೆಸಿದ್ದು, ಇಂತಿಷ್ಟೇ ಪರಿಹಾರ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು. ಆದರೆ ಲಭ್ಯ ಸಂಪನ್ಮೂಲ ಮತ್ತು ನಿಧಿಯ ಆಧಾರದ ಮೇಲೆ ಕೇಂದ್ರ ಸರಕಾರವೇ ಕನಿಷ್ಠ ಪರಿಹಾರ ನೀಡಬೇಕು ಎಂದು ಅದು ಸೂಚನೆ ನೀಡಿತು.
ಅಲ್ಲದೆ ಈ ಬಗ್ಗೆ ಮಾರ್ಗಸೂಚಿ ಸಿದ್ಧಗೊಳಿಸಲು ಎನ್‌ಡಿಎಂಎಗೆ ಸೂಚಿಸಿರುವ ಕೋರ್ಟ್, ಕೊರೊನಾದಿಂದ ಸಾವನ್ನಪ್ಪಿದವರಿಗೆ ಶೀಘ್ರದಲ್ಲೇ ಮರಣ ಪ್ರಮಾಣಪತ್ರ ಸಿಗುವಂತೆ ನೋಡಿಕೊಳ್ಳಬೇಕು ಎಂದೂ ಆದೇಶಿಸಿತು.
ಇದನ್ನೂ ಓದಿ :ಜವಳಿ ಸಚಿವರು ನೇಕಾರರ ನೆರವಿಗೆ ಬರಬೇಕು : ಮಾಜಿ ಸಚಿವೆ ಉಮಾಶ್ರೀ
ಕೊರೊನಾದಿಂದ ಮೃತಪಟ್ಟವರಿಗೆ ತಲಾ 4 ಲಕ್ಷ ರೂ.ಗಳನ್ನು ನೀಡಲು ಕೇಂದ್ರ ಸರಕಾರಕ್ಕೆ ಸೂಚಿಸಬೇಕು ಎಂದು ವಕೀಲರಿಬ್ಬರು ಸುಪ್ರೀಂ ಮೊರೆ ಹೋಗಿದ್ದರು. ಆದರೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ವಾದಿಸಿತ್ತು. ಕೇಂದ್ರದ ವಾದ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಪರಿಹಾರ ನೀಡುವಂತೆ ಸೂಚಿಸಿದೆ.