Advertisement

Supreme Court: ಮಸೀದಿ ಆವರಣದೊಳಗೆ ಜೈ ಶ್ರೀರಾಮ್‌ ಎಂದರೆ ಅಪರಾಧವೇ: ಸುಪ್ರೀಂ

10:26 AM Dec 17, 2024 | Team Udayavani |

ಹೊಸದಿಲ್ಲಿ: ಮಸೀದಿಯ ಆವರಣದಲ್ಲಿ “ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವುದು ಕ್ರಿಮಿನಲ್‌ ಅಪರಾಧ ಹೇಗಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ. ಅಲ್ಲದೆ ಈ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಕರ್ನಾಟಕ ಸರಕಾರಕ್ಕೆ ಸೂಚಿಸಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಇದನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಹೈದರ್‌ ಅಲಿ ಸಿಎಂ ಎಂಬವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪಂಕಜ್‌ ಮಿತ್ತಲ್‌ ಹಾಗೂ ನ್ಯಾ| ಸಂದೀಪ್‌ ಮೆಹ್ತಾ ಅವರಿದ್ದ ನ್ಯಾಯಪೀಠ ಈ ರೀತಿ ಪ್ರಶ್ನಿಸಿದೆ. ಅಲ್ಲದೆ ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.

ಕೋರ್ಟ್‌ ಹೇಳಿದ್ದೇನು?
ಆರೋಪಿಗಳು ನಿರ್ದಿಷ್ಟ ನುಡಿಗಟ್ಟು ಅಥವಾ ಹೆಸರನ್ನು ಕೂಗುತ್ತಿದ್ದರು. ಇದನ್ನು ಕ್ರಿಮಿನಲ್‌ ಅಪರಾಧ ಎಂದು ಹೇಗೆ ಪರಿಗಣಿಸಿದಿರಿ? ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದನ್ನು ಪತ್ತೆ ಮಾಡಿದ್ದು ಹೇಗೆ? ಆರೋಪಿಗಳ ಗುರುತು ಖಾತ್ರಿ ಪಡಿಸುವ ಮುನ್ನ ಸಿಸಿಟಿವಿ ಇಲ್ಲವೇ ಮತ್ಯಾವುದೇ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ಅಲ್ಲದೆ ನಿರ್ದಿಷ್ಟವಾದ ಧಾರ್ಮಿಕ ಘೋಷಣೆಗಳನ್ನು ಕೂಗುವುದು ಅಪರಾಧ ಹೇಗಾಗುತ್ತದೆ? ಮಸೀದಿ ಆವರಣದಲ್ಲಿ ಅವರನ್ನು ಗುರುತಿಸಿದವರು ಯಾರು ಎಂದು ಅರ್ಜಿದಾರ ಹೈದರ್‌ ಅಲಿ ಅವರನ್ನು ಪ್ರಶ್ನಿಸಿದೆ. ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ದೇವದತ್ತ ಕಾಮತ್‌, ಪೊಲೀಸ್‌ ತನಿಖೆ ಮುಕ್ತಾಯವಾಗುವ ಮೊದಲೇ ರಾಜ್ಯ ಹೈಕೋರ್ಟ್‌ ಈ ಪ್ರಕರಣವನ್ನು ರದ್ದು ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಗೆ ತಿಳಿಸಿದರು.

ಏನಿದು ಪ್ರಕರಣ?
ದಕ್ಷಿಣ ಕನ್ನಡದ ಕಡಬ ತಾಲೂಕಿನ ಗ್ರಾಮವೊಂದರಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ 2023ರ ಸೆ. 24ರಂದು ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಾರೆ ಎಂದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, “ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ’ ಎಂದು ದೂರುದಾರರೇ ಹೇಳಿದ್ದಾರೆ. ಘೋಷಣೆ ಕೂಗಿದೊಡನೆ ಅಪರಾಧ ಆಗುವುದಿಲ್ಲ ಎಂದು ಹೇಳಿ ಪ್ರಕರಣವನ್ನು ರದ್ದು ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next