ಹೊಸದಿಲ್ಲಿ: ಕೋವಿಡ್ 19 ವೈರಸ್ ಕುರಿತಂತೆ ಸುಳ್ಳು ಸುದ್ದಿಗಳು ಹಬ್ಬುವುದನ್ನು ತಡೆಗಟ್ಟಲು ಮತ್ತು ಸೋಂಕಿನ ಕುರಿತು ಸಾರ್ವಜನಿಕರಿಗೆ ಆ ಕ್ಷಣದ ಮಾಹಿತಿ ನೀಡಲು 24 ಗಂಟೆಗಳ ಒಳಗಾಗಿ ಪೋರ್ಟಲ್ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಜನರನ್ನು ವಿನಾಕಾರಣ ಆತಂಕಕ್ಕೆ ದೂಡುವ ಸುಳ್ಳು ಸುದ್ದಿಗಳು ಅಥವಾ ವದಂತಿಗಳೇ ಕೋವಿಡ್ 19 ವೈರಸ್ ಸೋಂಕಿಗಿಂತಲೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸೂಚನೆ ನೀಡಿದ 24 ಗಂಟೆಗಳ ಒಳಗೆ ಪೋರ್ಟಲ್ ಆರಂಭಿಸಬೇಕು. ದೇಶದ ವಿವಿಧೆಡೆ ಆಶ್ರಯ ಪಡೆದಿರುವ ವಲಸಿಗರಿಗೆ ಧೈರ್ಯ ತುಂಬಲು ತರಬೇತಿ ಪಡೆದ, ಅನುಭವಿ ಸಲಹೆಗಾರರು ಮತ್ತು ಸಮುದಾಯ ಮುಖಂಡರನ್ನು ನೇಮಿಸುವಂತೆ ತಿಳಿಸಿದೆ.
ಅಲ್ಲದೆ, ಜನ ವಲಸೆ ಹೋಗುವುದನ್ನು ತಡೆಗಟ್ಟಿ, ಅವರಿಗೆಲ್ಲಾ ಸೂಕ್ತ ಆಹಾರ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಸೂಚಿಸಿದೆ. ಅದಕ್ಕೆ ಉತ್ತರಿಸಿದ ಕೇಂದ್ರ ಸರಕಾರ ವಲಸೆ ಕಾರ್ಮಿಕರಿಗೆ ಆಶ್ರಯ, ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದೆ.
ಕಾಸರಗೋಡು ಮತ್ತು ಪಶ್ಚಿಮ ಬಂಗಾಲದ ಸಂಸದರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರಿದ್ದ ನ್ಯಾಯಪೀಠ, ವಲಸಿಗರು ಆಶ್ರಯ ಪಡೆದಿರುವ ಮನೆ ಅಥವಾ ಕಟ್ಟಡದ ಮೇಲ್ವಿಚಾರಣೆ ಹೊಣೆಯನ್ನು ಯಾವುದೇ ಕಾರಣಕ್ಕೂ ಪೊಲೀಸರಿಗೆ ವಹಿಸಬಾರದು. ಸ್ವಯಂ ಸೇವಕರು ವಲಸಿಗರನ್ನು ನೋಡಿಕೊಳ್ಳಬೇಕು ಮತ್ತು ವಲಸಿಗರ ಮೇಲೆ ಯಾವುದೇ ರೀತಿಯ ಬಲವಂತ, ಒತ್ತಡ ಹೇರುವ ಕೆಲಸ ಆಗಬಾರದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ.