ಹೊಸದಿಲ್ಲಿ: ಸಾಮೂಹಿಕ ಹೊಣೆ ಗಾರಿಕೆ ತತ್ವವನ್ನು ಅನುಸರಿಸಿದರೂ ಒಬ್ಬ ಸಚಿವ ನೀಡುವ ಆಕ್ಷೇಪಾರ್ಹ ಹೇಳಿಕೆಯನ್ನು ಸರಕಾರದ ಹೇಳಿಕೆ ಎಂದು ಪರಿಗಣಿಸಲು ಆಗುವು ದಿಲ್ಲ. ಹಾಗೆಯೇ ಸಾರ್ವಜನಿಕ ಸೇವೆಯಲ್ಲಿರುವ ಜನ ಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ.
– ಇದು ನ್ಯಾ| ನಜೀರ್ ನೇತೃತ್ವದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ನೀಡಿ ರುವ ತೀರ್ಪು. ಕೆಲವು ಸಚಿವರು, ಸಂಸದರು, ಶಾಸಕರು ಹಾಗೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂ ಸುವಂಥ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹಾಕಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿ ಸಂವಿಧಾನ ಪೀಠ ಮಂಗಳವಾರ 4:1 ಅನುಪಾತದ ತೀರ್ಪು ನೀಡಿತು.
ನ್ಯಾಯಮೂರ್ತಿಗಳಾದ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮ ಸುಬ್ರಮಣಿಯನ್ ಅವರು ಜನಪ್ರತಿನಿಧಿಗಳು ನೀಡುವ ಅವಹೇಳನಕಾರಿ ಹೇಳಿಕೆಗಳನ್ನು ಸರಕಾರದ್ದು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಭಿನ್ನ ತೀರ್ಪು ನೀಡಿರುವ ನ್ಯಾ| ಬಿ.ವಿ. ನಾಗರತ್ನಾ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧ ಹೇರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಸರಕಾರದ ಅಧಿಕೃತ ಸ್ಥಾನದಲ್ಲಿದ್ದು ಇಂಥ ಹೇಳಿಕೆ ನೀಡಿದರೆ ಅದಕ್ಕೆ ಸರಕಾರವೂ ಜವಾಬ್ದಾರಿಯಾಗುತ್ತದೆ ಎಂದಿ ದ್ದಾರೆ. ಸಂವಿಧಾನದ ವಿಧಿ 19 (1)(ಎ)ಯಲ್ಲಿ ಉಲ್ಲೇಖವಾಗಿರುವಂತೆ ಸರಕಾರದ ವ್ಯವಸ್ಥೆಯ ಹೊರತಾಗಿಯೂ ಜನಪ್ರತಿನಿಧಿಗಳು ತಮ್ಮ ಭಿನ್ನ ಅಭಿಪ್ರಾಯಗಳನ್ನು ದಾಖಲಿಸಲು ಅವಕಾಶ ಇದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜನಪ್ರತಿನಿಧಿಗಳ ಮೇಲೆ ಸಂವಿಧಾನದ 19 (2) ವಿಧಿಯ ಅನ್ವಯ ಮಿತಿ ಹೇರಲು ಸದ್ಯ ಅಸಾಧ್ಯ. ಏಕೆಂದರೆ ಅದರ ಮಿತಿಯ ವ್ಯಾಪ್ತಿ ಎಲ್ಲ ಮುಕ್ತಾಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಜನಪ್ರತಿನಿಧಿ ಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. 2022ರ ನ. 15ರಂದು ತೀರ್ಪು ಕಾಯ್ದಿರಿಸಿದ್ದ ಸಂದರ್ಭದಲ್ಲಿ ಜನಪ್ರತಿನಿಧಿಗಳು ತಮ್ಮ ಮಾತುಗಳ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿತ್ತು. 2017ರ ಅ. 5ರಂದು ನೀಡಿದ್ದ ತೀರ್ಪಿನಲ್ಲಿ ಜನಪ್ರತಿನಿಧಿ ಅಥವಾ ಸಚಿವ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಹಲವು ತೀರ್ಪುಗಳನ್ನು ಉಲ್ಲೇಖೀಸಿತ್ತು.
ಪ್ರಕರಣವೇನು?
2016ರ ಜುಲೈಯಲ್ಲಿ ಉತ್ತರಪ್ರದೇಶದಲ್ಲಿ ಒಬ್ಬರ ಪತ್ನಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಸಚಿವರಾಗಿದ್ದ ಅಜಂ ಖಾನ್, “ಈ ಗ್ಯಾಂಗ್‌ರೇಪ್ ರಾಜಕೀಯ ಪಿತೂರಿ’ ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತ ವ್ಯಕ್ತಿಯು, “ಅಜಂ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ಪ್ರಕರಣವನ್ನು ದಿಲ್ಲಿಗೆ ವರ್ಗಾಯಿಸಬೇಕು’ ಎಂದು ಕೋರಿದ್ದರು. ಈ ವೇಳೆ ಜನಪ್ರತಿನಿಧಿ ಗಳು ನೀಡುವ ಹೇಳಿಕೆಗಳ ಮೇಲೆ ನಿರ್ಬಂಧ ವಿಧಿಸಬಹುದೇ ಎಂಬ ಪ್ರಶ್ನೆ ಮೂಡಿತ್ತು.