ಹೊಸದಿಲ್ಲಿ: ತನಿಖೆಗೆ ಅವಕಾಶ ಕೋರಿ, ಸಿಬಿಐ ಎಂಟು ರಾಜ್ಯಗಳಿಗೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಸಂಬಂಧಿತ ಸರಕಾರಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಂಥ ವಿಳಂಬ ಧೋರಣೆ ಸರಿಯಾದ ಕ್ರಮ ಅಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಅತೃಪ್ತಿ ವ್ಯಕ್ತಪಡಿಸಿದೆ.
ನ್ಯಾ.ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಾಜ್ಯಗಳು ಸಿಬಿಐ ಕೋರಿಕೆ ಬಗ್ಗೆ ತೀರ್ಮಾನ ಕೈಗೊಳ್ಳದಿರುವುದು ಮತ್ತು ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ವಿರುದ್ಧ ತಡೆಯಾಜ್ಞೆ ನೀಡಿರುವುದು ಅಡ್ಡಿಯಾಗಿದೆ ಎಂದು ಹೇಳಿತು.
2018ರಲ್ಲಿ ಸಿಬಿಐ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಕೇರಳ, ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಛತ್ತೀಸ್‌ಗಢ, ಮಿಜೋರಾಂ ಸರಕಾರಗಳಿಗೆ ತನಿಖೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಿಕೆ ಸಲ್ಲಿಸಿತ್ತು.
ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್‌ನ ಚಳಿಗಾಲದ ಅಧಿವೇಶನ?
ಸಿಬಿಐಯನ್ನು ಕೇಂದ್ರ ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ, ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಸರಕಾರಗಳು ಕೇಂದ್ರ ತನಿಖಾ ಸಂಸ್ಥೆಗೆ ತನಿಖೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಿದ್ದವು. ಈ ಎಂಟು ರಾಜ್ಯಗಳಲ್ಲಿಯೇ ಶೇ.78 ಪ್ರಕರಣಗಳು ಸಿಬಿಐ ವ್ಯಾಪ್ತಿಗೆ ಬರುತ್ತವೆ. ಅನುಮತಿ ಇಲ್ಲದ್ದರಿಂದ ವಿವಿಧ ಹಂತಗಳಲ್ಲಿ ವಿಚಾರಣೆ/ತನಿಖೆಗೆ ತೊಡಕಾಗಿದೆ ಎಂದು ಸಿಬಿಐ ನಿರ್ದೇಶಕರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದರು.