Advertisement

Supreme court: ಮುಟ್ಟಿನ ಮಾಸಿಕ ರಜೆ ಕಡ್ಡಾಯ ಅಸಾಧ್ಯ: ಸ್ವಾಗತಾರ್ಹ ಆದೇಶ

01:13 AM Jul 09, 2024 | Team Udayavani |

ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಅವಧಿಗೆ ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗದು; ಹಾಗೆ ಮಾಡಿದರೆ ಅವರ ಉದ್ಯೋಗಾವಕಾಶ ಗಳಿಂದ ವಂಚಿತಗೊಳಿಸಿದಂತೆ ಆಗಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸ್ವಾಗತಾರ್ಹ.

Advertisement

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾ| ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಈ ತೀರ್ಪನ್ನು ನೀಡಿರುವುದರ ಜತೆಗೆ ಈ ವಿಷಯದಲ್ಲಿ ಸೂಕ್ತ ಮಾದರಿ ನೀತಿಯನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಬೇಕೇ ಬೇಡವೇ, ಯಾರಿಗೆ-ಯಾವಾಗ ರಜೆ ನೀಡಬಹುದು ಇತ್ಯಾದಿ ವಿಷಯಗಳಲ್ಲಿ ನೀತಿ ರೂಪಿಸುವುದು ಸರಕಾರ, ಆರೋಗ್ಯ ಇಲಾಖೆಗಳ ಕಾರ್ಯವೇ ವಿನಾ ನ್ಯಾಯಾಲಯ ಅದನ್ನು ತೀರ್ಪಾಗಿ ಹೇಳುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿರುವುದು ಸೂಕ್ತವಾಗಿಯೇ ಇದೆ.

ಪ್ರೌಢ ವಯಸ್ಸನ್ನು ತಲುಪಿದ ಪ್ರತೀ ಬಾಲಕಿ ಹದಿಹರಯ, ಯೌವ್ವನ, ಮಹಿಳೆ- ಹೀಗೆ ವಿವಿಧ ವಯೋಮಾನೀಯ ಹಂತಗಳನ್ನು ದಾಟಿ ಋತುಚಕ್ರ ಬಂಧ ಆಗುವವರೆಗೆ ಪ್ರತೀ ತಿಂಗಳು ಋತುಸ್ರಾವವನ್ನು ಅನುಭವಿಸುತ್ತಾಳೆ. ಅದು ಆಕೆಯ ಪ್ರಜನನಾತ್ಮಕ ಆರೋಗ್ಯದ ಸಂಕೇತ; ಶಿಶುವನ್ನು ಹೆರುವುದು ಹೇಗೆ ಸ್ತ್ರೀಯ ವೈಶಿಷ್ಟéವೋ ಋತುಸ್ರಾವ- ಋತುಚಕ್ರ ಕೂಡ ಆಕೆಗಷ್ಟೇ ಇರುವುದು. ಮಾಸಿಕ ಋತುಸ್ರಾವದ ಅವಧಿಯಲ್ಲಿ ಕೆಲವು ನಿರ್ದಿಷ್ಟ ದೈಹಿಕ ಹಾಗೂ ಇತರ ತೊಂದರೆಗಳು ಸ್ತ್ರೀಯನ್ನು ಬಾಧಿಸುತ್ತವೆ.

ಗರ್ಭಕೋಶ- ಗರ್ಭಾಶಯದಿಂದ ಫ‌ಲದೀಕರಣವಾಗದ ಅಂಡ ಮತ್ತು ಭ್ರೂಣ ಬೆಳವಣಿಗೆಗೆ ನಿರ್ಮಾಣಗೊಂಡ ಪೂರಕ ವ್ಯವಸ್ಥೆಗಳು ದೇಹದಿಂದ ಹೊರಗೆ ಸ್ರಾವವಾಗು ವುದರ ಜತೆಗೆ ರಸದೂತಗಳ ಏರುಪೇರಿನಿಂದ ಹೊಟ್ಟೆನೋವು, ಭಾವನಾತ್ಮಕ ಏರಿಳಿತಗಳಂತಹ ಸಮಸ್ಯೆಗಳನ್ನು ಈ ದಿನಗಳಲ್ಲಿ ಆಕೆ ಅನುಭವಿಸುತ್ತಾಳೆ. ವಿಶೇಷವೆಂದರೆ, ಇದು ಎಲ್ಲ ಮಹಿಳೆಯರಿಗೆ ಏಕರೂಪವಾಗಿ ಇರುವುದಿಲ್ಲ. ಸ್ತ್ರೀಯಿಂದ ಸ್ತ್ರೀಗೆ ಭಿನ್ನವಾಗಿರುತ್ತದೆ. ಒಬ್ಬಳೇ ಮಹಿಳೆಯಲ್ಲಿಯೂ ಏಕರೂಪವಾಗಿರುವುದಿಲ್ಲ; ವಯಸ್ಸು, ಶಿಶುಜನನ ಮತ್ತಿತರ ಹಲವು ಅಂಶಗಳ ಪ್ರಭಾವದಿಂದ ವಯಸ್ಸಿನಿಂದ ವಯಸ್ಸಿಗೆ ಬದಲಾವಣೆಗೊಳ್ಳುತ್ತದೆ.

ಇದೇ ಕಾರಣದಿಂದಾಗಿ ಸುಪ್ರೀಂ ಕೋರ್ಟ್‌ ಮುಟ್ಟಿನ ದಿನಗಳ ರಜೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡಿದರೆ ಅದರಿಂದ ಮಹಿಳೆಯರಿಗೇ ತೊಂದರೆ ಉಂಟಾಗಬಹುದು ಎಂದು ಹೇಳಿದೆ. ಉದ್ಯೋಗ ನಿರ್ವಹಿಸುವ ಪ್ರತೀ ಮಹಿಳೆಯ ಹಕ್ಕು, ಅವಕಾಶಗಳಿಗೆ ಇದರಿಂದ ಸಮಸ್ಯೆ ಯಾಗಬಹುದು ಎಂಬ ಅಂಶವನ್ನು ನ್ಯಾಯಪೀಠ ಗಮನಿಸಿ ಎತ್ತಿ ಹಿಡಿದಿರುವುದು ಶ್ಲಾಘನಾರ್ಹ.

Advertisement

ಸುಪ್ರೀಂ ಕೋರ್ಟ್‌ ಹೇಳಿರುವ ಅಂಶಗಳು ಮಾತ್ರ ಅಲ್ಲದೆ ಮುಟ್ಟಿನ ರಜೆಯನ್ನು ಕಡ್ಡಾಯ ಮಾಡಿದರೆ ಅದರಿಂದ ಇನ್ನಿತರ ಹಲವು ರೀತಿಗಳಲ್ಲಿಯೂ ಸ್ತ್ರೀಯರಿಗೆ ತೊಂದರೆ ಆಗಬಹುದಾದ ಸಾಧ್ಯತೆಗಳಿವೆ. ಪ್ರತೀ ಮಹಿಳೆ ಯಾವಾಗ ಋತುಸ್ರಾವ ಹೊಂದುತ್ತಾಳೆ ಎಂಬುದು ಉದ್ಯೋಗ ಸ್ಥಳದಲ್ಲಿ ಈ ಮೂಲಕ ಬಹಿರಂಗವಾಗುವ ಸಾಧ್ಯತೆಗಳಿವೆ. ಇದರಿಂದ ಆಗಬಲ್ಲ ಮುಜುಗರ ಮತ್ತಿತರ ತೊಂದರೆಗಳಿವೆ. ಅದರಿಂದ ಆಕೆಯ ಖಾಸಗಿತನದ ಹಕ್ಕು ಉಲ್ಲಂಘನೆಯಾಗಬಹುದಾಗಿದೆ.

ಋತುಸ್ರಾವದ ಸಮಯದಲ್ಲಿ ಉದ್ಯೋಗ ನಿರ್ವಹಿಸಬೇಕೇ, ಬೇಡವೇ; ಆ ಸ್ಥಿತಿಯಲ್ಲಿ ಆಕೆ ಇದ್ದಾಳೆಯೇ ಇಲ್ಲವೇ ಎಂಬಿತ್ಯಾದಿ ಹಲವು ವಿಷಯಗಳು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರು ತ್ತವೆಯಾದ್ದರಿಂದ ಇಂಥವನ್ನೆಲ್ಲ ಕಡ್ಡಾಯದ ಅಡಿ ತರುವುದು ಅಸಾಧ್ಯ. ಕೇಂದ್ರ ಸರಕಾರವು ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ ಕಾರಗಳು, ಆರೋಗ್ಯ ಇಲಾಖೆಯಂತಹ ಭಾಗೀದಾರರ ಸಲಹೆ-ಸೂಚನೆ ಗಳನ್ನು ಪಡೆದು ಈ ವಿಷಯದಲ್ಲಿ ಯೋಗ್ಯ ನೀತಿಯನ್ನು ಇನ್ನೀಗ ರೂಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next