ನೋಯ್ಡಾ: ಸರ್ವೋಚ್ಚ ನ್ಯಾಯಾಲಯದ 61 ವರ್ಷದ ವಕೀಲೆಯನ್ನು ಸ್ವತಃ ಅವರ ಪತಿಯೇ ಹತ್ಯೆ ಮಾಡಿದ್ದಾರೆ. 4 ಕೋಟಿ ರೂ.ಗೆ ದುಬಾರಿ ಮನೆಯನ್ನು ಮಾರಲು ಹೊರಟಿದ್ದಕ್ಕೆ, ಪತ್ನಿ ಒಪ್ಪಿಲ್ಲವೆನ್ನುವುದೇ ಕೊಲೆಗೆ ಕಾರಣ. ಘಟನೆಯ ನಂತರ 36 ಗಂಟೆಗಳ ಕಾಲ ತಮ್ಮ ಮನೆಯ ಉಗ್ರಾಣದಲ್ಲಿ ಆರೋಪಿ ಅಜಯ್ ನಾಥ್(62) ಬಚ್ಚಿಟ್ಟುಕೊಂಡಿದ್ದಾರೆ! ಆರೋಪಿ ಅಜಯ್ ಅವರು ಭಾರತೀಯ ಕಂದಾಯ ಸೇವೆಗಳ ನಿವೃತ್ತ ಅಧಿಕಾರಿಯಾಗಿದ್ದಾರೆ.
ಪೊಲೀಸರು ಆರೋಪಿಯ ಮೊಬೈಲನ್ನು ಟ್ರ್ಯಾಕ್ ಮಾಡಿದಾಗ ಉಗ್ರಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಘಟನೆ ಉತ್ತರಪ್ರದೇಶದ ನೋಯ್ಡಾದ ಐಷಾರಾಮಿ ಪ್ರದೇಶದಲ್ಲಿ ಸಂಭವಿಸಿದೆ.
ವಕೀಲೆ, ಸಹೋದರಿ ರೇಣು ಸಿನ್ಹಾ ತಮ್ಮ ಕರೆಗೆ 2 ದಿನಗಳಿಂದ ಉತ್ತರಿಸುತ್ತಿಲ್ಲ ಎಂದು ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ದುಬಾರಿ ಮನೆಯ ಸ್ನಾನದ ಕೋಣೆಯಲ್ಲಿ ರೇಣು ಸಿನ್ಹಾ ಶವ ಸಿಕ್ಕಿದೆ. ಕೊಲೆ ಭಾನುವಾರವೇ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಕೊಲೆಗೆ ತಮ್ಮ ಭಾವನವರೇ ಕಾರಣವಿರುವ ಸಾಧ್ಯತೆಯಿದೆ, ಅವರೂ ಮೊಬೈಲ್ ಕರೆಗೆ ಸಿಗುತ್ತಿಲ್ಲ ಎಂದು ರೇಣು ಸಹೋದರ ಹೇಳಿದ್ದಾರೆ. ಇದಾದ ಮೇಲೆ ರೇಣು ಪತಿ ಅಜಯ್ ನಾಥ್‌ರನ್ನು ಹುಡುಕಲಾಗಿದೆ. ಅಜಯ್ ಮನೆಯನ್ನು ಹೊರಗಿನಿಂದ ಲಾಕ್ ಮಾಡಿ, ಟೆರೇಸ್‌ನಲ್ಲಿರುವ ಉಗ್ರಾಣದಲ್ಲಿ ಸತತ 36 ಗಂಟೆಗಳಿಂದ ಅವಿತುಕೊಂಡಿದ್ದು ಗೊತ್ತಾಗಿದೆ.
ಇತ್ತೀಚೆಗಷ್ಟೇ ರೇಣು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದರು. ಅವರು ವಾಸಿಸುತ್ತಿದ್ದ ಬಂಗಲೆಯನ್ನು ಮಾರಲು ಅಜಯ್ ನಿರ್ಧರಿಸಿ, ಮುಂಗಡ ಹಣವನ್ನೂ ಪಡೆದಿದ್ದರು. ಪತ್ನಿ ಒಪ್ಪದಿದ್ದರಿಂದ ಆಗಾಗ ಜಗಳ ನಡೆದಿತ್ತು. ಅದೀಗ ಕೊಲೆಯಲ್ಲಿ ಮುಕ್ತಾಯವಾಗಿದೆ.