Advertisement
ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಿಲ್ಲಿಗೆ ಸಂಬಂಧಪಟ್ಟಂತೆ ನೀಡಿದ ತೀರ್ಪನಲ್ಲಿ ಎಲ್ಲೂ ಪಟಾಕಿ ಸುಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು. ಆದರೆ ಈ ಆದೇಶವನ್ನು ದಿಲ್ಲಿಯ ಜನತೆ ಸಾರಾಸಗಟಾಗಿ ಉಲ್ಲಂ ಸಿದ್ದರು. ಒಂದರ್ಥದಲ್ಲಿ ಇದು ನ್ಯಾಯಾಲಯದ ಆದೇಶವನ್ನು ಬಹಿರಂಗವಾಗಿ ಉಲ್ಲಂ ಸಿದಂತಾಗುತ್ತದೆ. ಅಲ್ಲದೆ ಈ ತೀರ್ಪು ಧಾರ್ಮಿಕ ನೆಲೆಯಲ್ಲಿ ಭಾರೀ ಟೀಕೆಗೂ ಗುರಿಯಾಗಿತ್ತು. ಪಟಾಕಿ ಸುಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವುದರಲ್ಲಿ ಯಾರಿಗೂ ತಕರಾರಿಲ್ಲ. ಆದರೆ ಒಂದು ಸಮುದಾಯದ ಹಬ್ಬಕ್ಕೆ ಮಾತ್ರ ನಿರ್ಬಂಧಗಳನ್ನು ಹೇರುವುದು ಏಕೆ ಎಂಬ ಪ್ರಶ್ನೆ ಸಾಮಾಜಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೀಡಾಗಿತ್ತು.ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಈ ಸಲ ಪಟಾಕಿ ಸುಡುವುದನ್ನು ಸಂಪೂರ್ಣ ನಿಷೇಧಿಸದಿದ್ದರೂ ಕೆಲವೊಂದು ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿದೆ. ಆ ಪ್ರಕಾರ ದೀಪಾವಳಿ ಹಬ್ಬದ ವೇಳೆ ರಾತ್ರಿ 8ರಿಂದ 10 ಗಂಟೆಯ ಒಳಗಾಗಿ ಪಟಾಕಿ ಸುಡಬೇಕು ಎಂದು ಹೇಳಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55ರಿಂದ 12.30ರ ತನಕ ಮಾತ್ರ ಪಟಾಕಿ ಸುಡಲು ಅವಕಾಶ ನೀಡುವ ಮೂಲಕ ಒಂದು ಧರ್ಮಕ್ಕೆ ಮಾತ್ರ ಕಟ್ಟುಪಾಡು ವಿಧಿಸಲಾಗುತ್ತದೆ ಎಂಬ ಆರೋಪಕ್ಕೆ ಅವಕಾಶ ಇಲ್ಲದಂತೆ ಮಾಡಿರುವುದು ಸಮುಚಿತವಾದ ನಿರ್ಧಾರ.
ಪಟಾಕಿ ಉದ್ಯಮ ಲಕ್ಷಾಂತರ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗವಕಾಶ ಕೊಡುತ್ತಿದೆ. ಏಕಾಏಕಿ ನ್ಯಾಯಾಲಯ ಪಟಾಕಿಯನ್ನು ನಿಷೇಧಿಸಿದ್ದರೆ ಅವರ ಬದುಕಿನ ಮೇಲೆ ಗಂಭೀರವಾದ ಪರಿಣಾಮವಾಗುತ್ತಿತ್ತು. ಈ ನೆಲೆಯಲ್ಲೂ ನ್ಯಾಯಾಲಯ ತೀರ್ಪು ನೀಡುವಾಗ ಸಂಯಮವನ್ನು ಪಾಲಿಸಿದೆ.
ಚಳಿಗಾಲದಲ್ಲಿ ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಹವಾಮಾನ ದುಸ್ತರವಾಗುತ್ತದೆ. ದಿಲ್ಲಿ ನಗರವಂತೂ ಅಕ್ಷರಶಃ ಗ್ಯಾಸ್ ಚೇಂಬರ್ ಆಗುವುದನ್ನು ಪ್ರತಿವರ್ಷ ನೋಡುತ್ತಿದ್ದೇವೆ. ಪಂಜಾಬ್, ಹರ್ಯಾಣ ಮತ್ತಿತರ ರಾಜ್ಯಗಳ ರೈತರು ಅಪಾರ ಪ್ರಮಾಣದ ಬೈಹುಲ್ಲು ಸುಡುವುದು ಉತ್ತರ ಭಾರತದಲ್ಲಿ ಭಾರೀ ಪ್ರಮಾಣದ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದೇ ವೇಳೆ ದೀಪಾವಳಿ ಹಬ್ಬವೂ ಬರುವುದರಿಂದ ಪಟಾಕಿಯ ಮಾಲಿನ್ಯವೂ ಸೇರಿಕೊಳ್ಳುತ್ತದೆ. ಹೀಗೆ ಎಲ್ಲೆಡೆಯ ಒತ್ತಡದಿಂದ ಆ ಭಾಗದ ವಾತಾವರಣ ಕಲುಷಿತಗೊಂಡು ಜನರು ಉಸಿರಾಡುವುದಕ್ಕೂ ಕಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪಟಾಕಿ ಸುಡುವುದಕ್ಕೆ ವಿಧಿಸಿರುವ ನಿರ್ಬಂಧಗಳು ಒಂದಿಷ್ಟಾದರೂ ನಿರಾಳತೆಯನ್ನು ಒದಗಿಸಬಹುದು. ಆದರೆ ಕಾನೂನಿಂದಲೇ ಎಲ್ಲವನ್ನೂ ನಿಯಂತ್ರಿಸಲಾಗದು. ಕಾನೂನು ಇರುವುದೇ ಉಲ್ಲಂ ಸಲು ಎಂಬ ಭಾವನೆಯಿರುವ ಜನರೂ ಇರುವುದರಿಂದ ನಿಷೇಧವೊಂದರಿಂದಲೇ ಪಟಾಕಿ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ಕುರಿತು ಜನರಲ್ಲಿ ಸ್ವಯಂ ಅರಿವು ಮೂಡಬೇಕು. ನೀತಿ ರೂಪಿಸುವುದು ಮತ್ತು ಅದನ್ನು ಜಾರಿಗೊಳಿಸುವ ಶಾಸಕಾಂಗ ಮತ್ತು ಕಾರ್ಯಾಂಗದ ಹೊಣೆಗಾರಿಕೆ. ಇದರಲ್ಲಿ ಲೋಪವಾದರೆ ಮಾತ್ರ ನ್ಯಾಯಾಂಗ ಮಧ್ಯ ಪ್ರವೇಶ ಮಾಡಬೇಕು. ಸರಕಾರ ಮತ್ತು ಸಮಾಜವೇ ಪಟಾಕಿಯಿಂದಾಗುವ ಹಾನಿಯನ್ನು ಅರಿತುಕೊಂಡು ಅದರ ಬಳಕೆಯಿಂದ ದೂರವಾದರೆ ಉತ್ತಮ. ಜನರಲ್ಲಿ ಪಟಾಕಿಯ ಹಾನಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲ ಸಮುದಾಯಗಳ ಮುಖಂಡರು ನೇತೃತ್ವ ವಹಿಸಿಕೊಂಡರೆ ಅನುಕೂಲವಾಗುತ್ತಿತ್ತು.