ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಾದ್ಯಂತ ವ್ಯಾಪಿಸಿರುವ ವಿಷಕಾರಿ ಹೊಗೆ ಹಾಗೂ ಅದರಿಂದ ಸೃಷ್ಟಿಯಾಗಿರುವ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ವಾಯು ಗುಣಮಟ್ಟವು ಗಂಭೀರದಲ್ಲೇ ಗಂಭೀರ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿ ಬಗ್ಗೆ ಕಳವಳ ಹಾಗೂ ಸರಕಾರಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಬೆಳೆ ಕಳೆಗಳಿಗೆ ಬೆಂಕಿ ಹಚ್ಚುವುದರ ಮೇಲೆ ತಾನೇ ನಿಗಾ ಇಡುವುದಾಗಿ ಘೋಷಿಸಿದೆ.
ಅಷ್ಟೇ ಅಲ್ಲ, ಯಾರಾದರೂ ತ್ಯಾಜ್ಯ ಸುಡುವುದು ಕಂಡುಬಂದರೆ, ಅಂಥವರಿಗೆ ಬರೋಬ್ಬರಿ 1 ಲಕ್ಷ ರೂ. ದಂಡ ಹಾಗೂ ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವವರಿಗೆ 5 ಸಾವಿರ ರೂ. ದಂಡ ವಿಧಿಸುವುದಾಗಿ ಕೋರ್ಟ್ ಘೋಷಿಸಿದೆ. ಜತೆಗೆ, ಈ ಕುರಿತು ಕೋರ್ಟ್ ನೀಡಿರುವ ನಿರ್ದೇಶನಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆಯೂ ಸೂಚಿಸಿದೆ.
ನಾವು ಬದುಕಲು ಸಾಧ್ಯವೇ?: ಸೋಮವಾರ ವಾಯುಮಾಲಿನ್ಯ ಕುರಿತ ವಿಚಾರಣೆ ಆರಂಭಿಸಿದ ನ್ಯಾ. ಅರುವಣ್ ಮಿಶ್ರಾ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ, ಇಂಥ ವಾತಾವರಣದಲ್ಲಿ ನಾವು ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿತು. ಅನಂತರ, ‘ಈ ಮಾಲಿನ್ಯದಿಂದಾಗಿ ಜನ ತಮ್ಮ ಬದುಕಿನ ಮೌಲ್ಯಯುತ ಅವಧಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ಪ್ರತಿ ವರ್ಷ ದಿಲ್ಲಿಯ ಪರಿಸ್ಥಿತಿ ಇದೇ ಆಗುತ್ತಿದೆ. ಇದು ಹೀಗೆ ಮುಂದುವರಿಯಬಾರದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರರ ಮೇಲೆ ಆರೋಪ ಮಾಡುತ್ತಾ ದಿನದೂಡಿದರೆ ಹೇಗೆ? ಜನರು ತಮ್ಮ ತಮ್ಮ ಮನೆಗಳ ಒಳಗೂ ಸುರಕ್ಷಿತವಾಗಿಲ್ಲದಂಥ ಪರಿಸ್ಥಿತಿ ಇದೆ. ಒಂದು ನಾಗರಿಕ ಸಮಾಜದಲ್ಲಿ ಹೀಗಾ ಗುತ್ತಿರುವುದು ನಾಚಿಕೆಯ ಸಂಗತಿ’ ಎಂದು ನ್ಯಾಯಪೀಠ ಹೇಳಿದೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಿ, ಬುಧವಾರ ಹಾಜ ರಾಗುವಂತೆ ನಿರ್ದೇಶಿಸಿದೆ. ಅಲ್ಲದೆ, ಒಂದೇ ಒಂದು ಬೆಳೆ ಕಳೆ ದಹನದಂಥ ಪ್ರಕರಣವೂ ನಡೆಯದಂತೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆ ಮತ್ತು ಸ್ಥಳೀಯಾಡಳಿತ ನೋಡಿಕೊಳ್ಳಬೇಕು ಎಂದು ಹೇಳಿದೆ.
ಈ ನಡುವೆ, ದಿಲ್ಲಿ ಸರಕಾರದ ಸಮ- ಬೆಸ ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದರಿಂದ ಆಗುವ ಲಾಭವಾದರೂ ಏನು ಎಂದು ಪ್ರಶ್ನಿಸಿದೆ. ಬುಧವಾರ ಮುಂದಿನ ವಿಚಾರಣೆ ನಡೆಯಲಿದೆ.