ಹೊಸದಿಲ್ಲಿ: ಜ್ಞಾನವಾಸಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಗೆ ಎರಡು ದಿನಗಳ ಕಾಲ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ವೆಗೆ ತಡೆ ನೀಡುವಂತೆ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಜುಲೈ 26ರವರೆಗೆ ಯಾವುದೇ ಸಮೀಕ್ಷೆ ನಡೆಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದ್ದು, ಪರಿಹಾರಕ್ಕಾಗಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗುವಂತೆ ಮುಸ್ಲಿಂ ಅರ್ಜಿದಾರರಿಗೆ ಸೂಚಿಸಿದೆ.
30 ಸದಸ್ಯರ ಎಎಸ್ ಐ ತಂಡವು ಸೋಮವಾರ ಬೆಳಗ್ಗೆ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಮಸೀದಿಯನ್ನು ಪ್ರಾಚೀನ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸರ್ವೆ ಮಾಡಲಾಗುತ್ತಿದೆ.
ಅಲಹಾಬಾದ್ ಹೈಕೋರ್ಟ್ ನಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದ ಎಎಸ್‌ಐ ಆದೇಶವನ್ನು ಪ್ರಶ್ನಿಸಲು ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಗೆ ನ್ಯಾಯಾಲಯವು ಸ್ವಲ್ಪ ” breathing time” ನೀಡಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಸೀದಿ ಮಂಡಳಿ ಅರ್ಜಿ ಸಲ್ಲಿಸಿತ್ತು. ಇಡೀ ಆವರಣದ ಉತ್ಖನನ ಸೇರಿದಂತೆ ಸಮೀಕ್ಷೆಯ ಆದೇಶವು ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ಅಡ್ಡಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.