Advertisement

ಯೋಗ ಆರೋಗ್ಯಕ್ಕೆ ಸುಪ್ರೀಂ ಕೋರ್ಟ್‌: ಶ್ರೀ

09:45 AM Jun 21, 2018 | Team Udayavani |

ದಾವಣಗೆರೆ: ಅಲೋಪತಿ, ಹೊಮಿಯೋಪಥಿ ಕೆಳ ಹಂತದ ಕೋರ್ಟ್‌. ಆಯುರ್ವೇದ ಹೈಕೋರ್ಟ್‌,
ಯೋಗ ಸುಪ್ರೀಂ ಕೋರ್ಟ್‌ ಇದ್ದ ಹಾಗೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಬಣ್ಣಿಸಿದ್ದಾರೆ.

Advertisement

ನಗರದ ಸರ್ಕಾರಿ ಬಾಲಕರ ಹೈಸ್ಕೂಲ್‌  ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆಯುಷ್‌ ಇಲಾಖೆ, ತಪೋವನ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದಿಂದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿದ್ಯಾರ್ಥಿಗಳ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮಾತನಾಡಿದ ಅವರು, ನಿತ್ಯವೂ ಯೋಗಾಸನ ಮಾಡಿ, ಆರೋಗ್ಯವಂತರಾಗಿರಿ. ಹಾಗೆಯೇ ಪ್ರತಿಯೊಬ್ಬರೂ ಮದ್ಯ ಬಿಟ್ಟು, ಗ್ರೀನ್‌ ಟೀ ಕುಡಿಯಿರಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರತಿನಿತ್ಯದ ಯೋಗಭ್ಯಾಸದಿಂದ ದೇಹಕ್ಕೆ ಶಕ್ತಿ ಬರುತ್ತದೆ. ವ್ಯಕ್ತಿತ್ವ ವಿಕಸನ ಹೊಂದಲಿದೆ. ಮುಖದಲ್ಲಿ ಕಾಂತಿ ಹೊಮ್ಮುತ್ತದೆ. ಸರಿಯಾಗಿ ಉಸಿರಾಡುವುದು ಹಾಗೂ ವಿವಿಧ ಬಗೆಯ ಯೋಗಾಸನ ಮಾಡುವುದರಿಂದ ಯಾವುದೇ
ಕಾಯಿಲೆಗಳು ಹತ್ತಿರ ಸುಳಿಯವುದಿಲ್ಲ ಎಂದರು. ಹಾಡಿ ಹಾಡಿ ರಾಗಾ ಬಂತು….ಉಗುಳಿ ಉಗುಳಿ ರೋಗ ಬಂತು ಎನ್ನುವ ಹಾಗೆ ಪ್ರತಿಯೊಬ್ಬರೂ ಲಾಲಾರಸವನ್ನು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ.

ಈ ಲಾಲಾ ರಸದಲ್ಲಿ 1 ಲಕ್ಷ ಜೀವರಾಶಿಗಳು ಇರುತ್ತವೆ. ಈ ಕಾರಣಕ್ಕಾಗಿಯೇ ಪ್ರಾಣಿಗಳು ಗಾಯದ ಮೇಲೆ ನೆಕ್ಕುತ್ತಲೇ ಇರುವುದು. ಹಾಗಾಗಿ ಗಾಯ ಬೇಗ ಮಾಯವಾಗುತ್ತದೆ. ಆದ್ದರಿಂದ ಯಾರೂ ಕೂಡ ಉಗುಳಬೇಡಿ ಎಂದು ಅವರು ಸಲಹೆ ನೀಡಿದರು.

ಯೋಗ ಜಾಗೃತಿ ಜಾಥಾ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಯೋಗ ಮಾಡುವುದರಿಂದ ಸಕ್ಕರೆ ಕಾಯಿಲೆ, ಹೃದಯ, ಮೈ, ಕೈ ನೋವು ಮಾಯವಾಗುತ್ತವೆ. ಯೋಗ ಬಲ್ಲವರು ಆರೋಗ್ಯವಂತರಾಗಿರುವುದರ ಜೊತೆಗೆ ಚೈತನ್ಯಶೀಲರಾಗಿರುತ್ತಾರೆ. ಯೋಗ ಹೆಚ್ಚು ಸಮಯ ಕೆಲಸ ಮಾಡಲು ಉತ್ಸಾಹ ತುಂಬುತ್ತದೆ ಎಂದರು.

Advertisement

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ,ಯೋಗ ಆರೋಗ್ಯ ನೀಡುವುದರ ಜೊತೆಗೆ ಉತ್ತಮ ಮನುಷ್ಯರಾಗಿ ಬದುಕಲು ದಾರಿ ದೀಪವಾಗುತ್ತದೆ ಎಂದರು.

ಯೋಗ ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ-ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಯೋಗಪಟು ಅರ್ಜೇಟೆನಾ  ವಿಕ್ಟರ್‌  ಡ್ರಿಯಾನೋ, ಇಳಕಲ್‌ ವಿಜಯ ಮಹಾಂತೇಶ್ವರ
ಮಠದ ಶ್ರೀ ಗುರು ಮಹಾಂತೇಶ್ವರ ಸ್ವಾಮೀಜಿ, ಶಾಸಕ ಎಸ್‌.ಎ. ರವೀಂದ್ರನಾಥ್‌, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ. ಉಮಾಪತಿ, ಜಿಪಂ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಜಿಪಂ ಸದಸ್ಯೆ ಶೈಲಾ ಬಸವರಾಜ್‌, ಪಾಲಿಕೆ ಮೇಯರ್‌ ಶೋಭಾ ಪಲ್ಲಾಗಟ್ಟೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೋದಂಡರಾಮ್‌, ಪಿಯು ಡಿಡಿ
ಸಾವಿತ್ರಮ್ಮ, ಜಿಲ್ಲಾ ಆಯುಷ್‌ ಅಧಿಕಾರಿ ಸಿದ್ದೇಶ್‌, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ವಾಸುದೇವ್‌ ರಾಯ್ಕರ್‌, ಎನ್‌ಸಿಸಿ ಕರ್ನಲ್‌ ಕೃಷ್ಣ ನಾಯರ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next