Advertisement

ಪಕ್ಷಗಳಿಗೆ ಸುಪ್ರೀಂ ಚಾಟಿ

12:31 AM Aug 11, 2021 | Team Udayavani |

ಹೊಸದಿಲ್ಲಿ: ರಾಜಕೀಯವನ್ನು ತೋಳ್ಬಲ ಮತ್ತು ಅಪರಾಧೀಕರಣದಿಂದ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್‌ ಎರಡು ಮಹತ್ವದ ಕ್ರಮಗಳಿಗೆ ಸೂಚನೆ ನೀಡಿದೆ.

Advertisement

ಶಾಸಕರು, ಸಂಸದರ ವಿರುದ್ಧ ದಾಖಲಾಗಿ ರುವ ಪ್ರಕರಣಗಳನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಹೈಕೋರ್ಟ್‌ ಅನುಮತಿ ಇಲ್ಲದೆ ವಾಪಸ್‌ ಪಡೆಯುವಂತಿಲ್ಲ ಎಂಬುದು ಒಂದನೆಯದು. ಚುನಾವಣೆ ಸಂದರ್ಭ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 48 ತಾಸುಗಳ ಒಳಗಾಗಿ ಅವರ ವಿರುದ್ಧದ ಪ್ರಕರಣಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಬೇಕು ಎಂಬುದು ಇನ್ನೊಂದು. ಈ ಬಗ್ಗೆ ಕಠಿನ ಆದೇಶ ನೀಡಿರುವ ಸು.ಕೋರ್ಟ್‌, ಈ ನಿಯಮ ಪಾಲಿಸದ 7 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದೆ.

ಮುಖ್ಯ ನ್ಯಾ| ಎನ್‌.ವಿ. ರಮಣ, ನ್ಯಾ| ವಿನೀತ್‌ ಶರಣ್‌ ಮತ್ತು ನ್ಯಾ| ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ ಸರಕಾರಗಳು ಅಪರಾಧ ದಂಡಸಂಹಿತೆಯ 321ನೇ ವಿಧಿಯ ಅನ್ವಯ ಶಾಸಕರು, ಸಂಸದರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್‌ ಪಡೆಯಲು ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಸು.ಕೋರ್ಟ್‌ನ ಈ ಆದೇಶ ಮಹತ್ವ ಪಡೆದಿದೆ.

ಗಾಢ ನಿದ್ದೆಯಲ್ಲಿ  ಪಕ್ಷಗಳು :

Advertisement

ಅಭ್ಯರ್ಥಿಗಳ ವಿರುದ್ಧ ಇರುವ ಪ್ರಕರಣಗಳ ವಿವರ ಬಹಿರಂಗ ಮಾಡಬೇಕು ಎಂದು ಆದೇಶಿಸಿದ್ದರೂ ರಾಜಕೀಯ ಪಕ್ಷಗಳು ಇನ್ನೂ ಗಾಢ ನಿದ್ದೆಯಲ್ಲಿ ಇವೆ ಮತ್ತು ಈ ನಿಟ್ಟಿನಲ್ಲಿ ನೀಡಿರುವ ಆದೇಶಗಳು ಅವುಗಳಿಗೆ ಕೇಳಿಸುತ್ತಲೇ ಇಲ್ಲ ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿದೆ.

ಯಾರಿಗೆ ಎಷ್ಟು  ದಂಡ? :

01 ಲಕ್ಷ ರೂ. :  ಬಿಜೆಪಿ, ಕಾಂಗ್ರೆಸ್‌, ಆರ್‌ಜೆಡಿ, ಸಿಪಿಐ, ಜೆಡಿಯು, ಎಲ್‌ಜೆಪಿ

05 ಲಕ್ಷ ರೂ.: ಸಿಪಿಎಂ, ಎನ್‌ಸಿಪಿ

ಸಂಸದರು, ಶಾಸಕರ ವಿರುದ್ಧ  ಪ್ರಕರಣ ಏರಿಕೆ  :

4,122 : 2018ರ ಡಿಸೆಂಬರ್‌

4,859 : 2020ರ ಸೆಪ್ಟಂಬರ್‌

ವರ್ಗಾವಣೆ ಸಲ್ಲದು:

ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಶೇಷ ಕೋರ್ಟ್‌ಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಮುಂದಿನ ಆದೇಶದ ವರೆಗೆ ಬೇರೆ ಕೋರ್ಟ್‌ಗೆ ವರ್ಗಾಯಿಸುವುದಕ್ಕೂ ನ್ಯಾಯಪೀಠ ತಡೆ ವಿಧಿಸಿದೆ. 321ನೇ ವಿಧಿಯ ದುರುಪಯೋಗವನ್ನು ತಡೆಯಬೇಕಿದೆ. ಹೀಗಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಆಯಾ ಹೈಕೋರ್ಟ್‌ಗಳ ಅನುಮತಿ ಇಲ್ಲದೆ ವಾಪಸ್‌ ಪಡೆಯುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ. ರಾಜಕೀಯ ಮುಖಂಡರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ಸು.ಕೋರ್ಟ್‌ನಲ್ಲಿಯೇ ವಿಶೇಷ ಪೀಠ ಸ್ಥಾಪನೆ ಸ್ಥಾಪಿಸುವ ಅಗತ್ಯದ ಬಗ್ಗೆಯೂ ಪ್ರಸ್ತಾವಿಸಿದೆ. ಹೈಕೋರ್ಟುಗಳ ರಿಜಿಸ್ಟ್ರಾರ್‌ ಜನರಲ್‌ಗ‌ಳು ವಿಶೇಷ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಆ. 25ರಂದು ಮುಂದಿನ ವಿಚಾರಣೆ ನಡೆಯಲಿದೆ.

ಪಕ್ಷಗಳಿಗೆ ದಂಡ :

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧ ಇರುವ ಮೊಕದ್ದಮೆಗಳ ವಿವರಗಳನ್ನು ಅಪ್‌ಲೋಡ್‌ ಮಾಡದೆ ಇರುವುದಕ್ಕೆ 7 ಪಕ್ಷಗಳಿಗೆ ದಂಡ ವಿಧಿಸಲಾಗಿದೆ. ತೀರ್ಪು ಪ್ರಕಟಗೊಂಡ ದಿನದಿಂದ ಎಂಟು ವಾರಗಳ ಒಳಗಾಗಿ ಬಿಜೆಪಿ, ಕಾಂಗ್ರೆಸ್‌, ಆರ್‌ಜೆಡಿ, ಸಿಪಿಐ, ಎಲ್‌ಜೆಪಿ, ಸಿಪಿಎಂ, ಎನ್‌ಸಿಪಿ ದಂಡ ಪಾವತಿ ಮಾಡಬೇಕು ಎಂದು ತೀರ್ಪಿತ್ತಿದೆ.

ರಾಜಕೀಯ ಕ್ಷೇತ್ರ ಅಪರಾಧಿ ಕರಣಗೊಳ್ಳುತ್ತಿರುವುದನ್ನು ತಡೆ ಯಲು ಮೊಕದ್ದಮೆಗಳ ವಿವರ ನೀಡಬೇಕೆಂದು ಕಳೆದ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next