ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ನೌಕರರಿಗೆ ಅವರ ವೇತನಕ್ಕೆ ತಕ್ಕಂತೆ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕೇರಳ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ನ್ಯಾ. ದೀಪಕ್ ಗುಪ್ತಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರುಳ್ಳ ನ್ಯಾಯಪೀಠ, ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್) ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದೆ.
ಸುಪ್ರೀಂ ತೀರ್ಪಿನಿಂದಾಗಿ, ನಿವೃತ್ತಿ ವೇಳೆಗೆ ಉತ್ತಮ ವೇತನ ಪಡೆದಿದ್ದರೂ, ನಿವೃತ್ತಿ ನಂತರ ಅತಿ ಕಡಿಮೆ ಪಿಂಚಣಿ ಪಡೆಯುವಂತಾಗಿದ್ದ ಅನೇಕ ಖಾಸಗಿ ಸಂಸ್ಥೆಗಳ ನೌಕರರು ಈಗ ಉತ್ತಮ ಪಿಂಚಣಿ ಪಡೆಯುವಂತಾಗಿದೆ.
2014ರಲ್ಲಿ ಉದ್ಯೋಗಗಿಳ ಪಿಂಚಣಿ ಯೋಜನೆ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದಿದ್ದ ಇಪಿಎಫ್ ಸಂಸ್ಥೆ, ಉದ್ಯೋಗಿಯ ಪಿಂಚಣಿ ಖಾತೆಗೆ ಪರಿಗಣಿಸಲಾಗುವ ವೇತನ ಮಿತಿಯನ್ನು 15,000 ರೂ.ಗಳಿಗೆ ಮಿತಿಗೊಳಿಸಿತು.
ಈ ವೇತನದ ಶೇ.8.33ರಷ್ಟನ್ನು ಮಾತ್ರ (ರೂ. 1,250) ಪಿಂಚಣಿ ಖಾತೆಗೆ ದೇಣಿಗೆಯನ್ನಾಗಿ ಸ್ವೀಕರಿಸುವ ನಿಯಮ ಜಾರಿಗೆ ತಂದಿತು. ಜತೆಗೆ, ಉದ್ಯೋಗಿ ನಿವೃತ್ತಿಗೂ ಮುನ್ನ 5 ವರ್ಷಗಳಿಂದ ಪಡೆಯುತ್ತಿದ್ದ ವೇತನದ ಸರಾಸರಿಯ ಆಧಾರದ ಮೇಲೆಯೇ ಪಿಂಚಣಿ ತೀರ್ಮಾನವಾಗುವ ನಿಯಮ ಜಾರಿಗೆ ತಂದಿತಲ್ಲದೆ, ಆವರೆಗೆ ಇದ್ದ ನಿವೃತ್ತಿಯ ಹಿಂದಿನ ಒಂದು ವರ್ಷದ ವೇತನದ ಆಧಾರದ ಮೇಲೆ ಪಿಂಚಣಿ ನೀಡುವ ನಿಯಮ ರದ್ದು ಮಾಡಿತು.
ಇಪಿಎಫ್ನ ಈ ನಿಯಮದ ವಿರುದ್ಧ ಕೇರಳದ ಕೆಲ ಖಾಸಗಿ ಉದ್ಯೋಗಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ತೀರ್ಪು ನೀಡಿ, ಇಪಿಎಫ್ ಸಂಸ್ಥೆಯ 2014 ತಿದ್ದುಪಡಿಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ನಿಯಮವನ್ನೇ ಪುನಃ ಜಾರಿಗೊಳಿಸುವಂತೆ ಸೂಚಿಸಿತ್ತು. ಆದರೆ, ಇದರ ವಿರುದ್ಧ ಇಪಿಎಫ್ ಸಂಸ್ಥೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಆದರೆ, ಸುಪ್ರೀಂ ಕೋರ್ಟ್ ತೀರ್ಪನ್ನು ಭಾಗಶಃ ಸ್ವೀಕರಿಸಿರುವ ಇಪಿಎಫ್ ಸಂಸ್ಥೆ, ಟ್ರಸ್ಟ್‌ಗಳ ಮೂಲಕ ನಡೆಯುವ ಕಂಪನಿಗಳ ನೌಕರರ ಪಿಂಚಣಿ ವಿಚಾರದಲ್ಲಿ ಹೊಸ ಆದೇಶವನ್ನು ಅನ್ವಯಿಸಲಾಗದು ಎಂದಿದೆ.