ನವದೆಹಲಿ:ಮಾರಣಾಂತಿಕ ಕೋವಿಡ್ 19 ಎರಡನೇ ಅಲೆ ಹೆಚ್ಚಳವಾಗುತ್ತಿದ್ದು, ದೆಹಲಿ ಆಸ್ಪತ್ರೆಗಳಿಗೆ ಸೋಮವಾರ(ಮೇ 03) ಮಧ್ಯರಾತ್ರಿಯೊಳಗೆ ಆಕ್ಸಿಜನ್ ಸರಬರಾಜು ಮಾಡುವ ಮೂಲಕ ಕೊರತೆಯನ್ನು ನಿವಾರಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಇದನ್ನೂ ಓದಿ:ಚಾಮರಾಜನಗರ ಪ್ರಕರಣ : ಸಮಸ್ಯೆ ಗೊತ್ತಿದ್ದರೂ ಸುಮ್ಮನಿದ್ದಿದ್ದು ಅಪರಾಧ : ಧ್ರುವನಾರಾಯಣ್ ಕಿಡಿ
ಇದು ನಾಗರಿಕರ ಜೀವದ ಪ್ರಶ್ನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿರುವ ಸುಪ್ರೀಂಕೋರ್ಟ್, ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಆಕ್ಸಿಜನ್ ಸರಬರಾಜು ಹೊಣೆಯನ್ನು ರಾಷ್ಟ್ರರಾಜಧಾನಿ ದೆಹಲಿ ಮೇಲೆ ವರ್ಗಾಯಿಸುವುದು ಸಮಂಜಸವಲ್ಲ ಎಂದು ಹೇಳಿದೆ.
ರಾಷ್ಟ್ರೀಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಜನರ ಜೀವನದ ರಕ್ಷಣೆಯೇ ಪ್ರಮುಖವಾಗಿದೆ. ಅಲ್ಲದೇ ಪರಿಸ್ಥಿತಿಯನ್ನು ಎಲ್ಲಾ ರೀತಿಯಿಂದಲೂ ಪರಿಹರಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಜಿಎನ್ ಸಿಟಿಡಿಯ ಸೇರಿದಂತೆ ಇಬ್ಬರ ಸಹಕಾರದ ಮೇಲೆ ಅವಲಂಬಿತವಾಗಿದೆ ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.
ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರಿ ಹಾಗೂ ಸಂಬಂಧಿತ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ(ಮೇ 03) ನಿರ್ದೇಶನ ನೀಡಿದೆ.