Advertisement

ಖಾಪ್‌ಗೆ ಕಡಿವಾಣ: ವಯಸ್ಕರ ಮದುವೆಯಲ್ಲಿ ಹಸ್ತಕ್ಷೇಪ ಸಲ್ಲ ಎಂದ ಸುಪ್ರೀಂ

09:10 AM Mar 28, 2018 | Team Udayavani |

ನವದೆಹಲಿ: ಇಬ್ಬರು ವಯಸ್ಕರ ಮದುವೆ ವಿಚಾರದಲ್ಲಿ ಖಾಪ್‌ ಪಂಚಾಯತ್‌ಗಳು ಮೂಗು ತೂರಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದರಿಂದಾಗಿ, ಖಾಪ್‌ ಪಂಚಾಯತ್‌ನಂಥ ಸ್ವಘೋಷಿತ ನ್ಯಾಯಾಲಯಗಳಿಂದ ಬೆದರಿಕೆ ಎದುರಿಸುತ್ತಿದ್ದ ಅಂತರ್‌ಜಾತಿ, ಅಂತರ್‌ಧರ್ಮೀಯ ಜೋಡಿಗಳು ನಿಟ್ಟುಸಿರು ಬಿಡುವಂತಾಗಿದೆ.

Advertisement

ಇಬ್ಬರು ವಯಸ್ಕರು ಮದುವೆಯಾಗಲು ನಿಶ್ಚಯಿಸಿದರೆ, ಅವರ ಸಂಬಂಧಿಗಳಾಗಲೀ, ಮೂರನೇ ವ್ಯಕ್ತಿಯಾಗಲೀ, ಖಾಪ್‌ ಪಂಚಾಯತ್‌ಗಳಾಗಲೀ ಹಸ್ತಕ್ಷೇಪ ಮಾಡುವುದು, ಬೆದರಿಕೆ ಹಾಕುವುದು ಅಥವಾ ಹಿಂಸಿಸುವುದು ಕಾನೂನು ಬಾಹಿರ. ಇಂಥ ಕೃತ್ಯಗಳು ಸಮಾ ಜದ ಮೇಲೆ ವಿಧ್ವಂಸಕ ಪರಿಣಾಮ ಬೀರಲಿದೆ  ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಜತೆಗೆ, ಮರ್ಯಾದಾ ಹತ್ಯೆಗಳು ಮಾನವನ ಘನತೆಯ ಮೇಲಿನ ಹಲ್ಲೆ. ಖಾಪ್‌ ಗಳು ಜೂಲಿಯಸ್‌ ಸೀಸರ್‌ ನ ಪೂರ್ವಜರೇನೂ ಅಲ್ಲವಲ್ಲ ಎಂದೂ ಪೀಠ ಖಾರವಾಗಿ ನುಡಿದಿದೆ. ಅಲ್ಲದೆ, ಇಂಥ ಹಸ್ತಕ್ಷೇಪಗಳನ್ನು ತಡೆಯಲು ಮಾರ್ಗಸೂಚಿಗಳನ್ನೂ ನ್ಯಾಯಪೀಠ ರಚಿಸಿದ್ದು, ಸೂಕ್ತ ಕಾನೂನು ಜಾರಿ ಆಗುವವರೆಗೆ ಈ ಮಾರ್ಗಸೂಚಿ ಚಾಲ್ತಿಯಲ್ಲಿರುತ್ತವೆ ಎಂದಿದೆ. ಇದೇ ವೇಳೆ, ‘ಖಾಪ್‌ ಪಂಚಾಯತ್‌’ಗಳನ್ನು ಈ ಹೆಸರಿಂದ ಕರೆಯುವುದಿಲ್ಲ ಎಂದಿರುವ ಪೀಠ, ಇವುಗಳನ್ನು ಕೆಲವು ವ್ಯಕ್ತಿಗಳ ಗುಂಪು ಎಂದು ಪರಿಗಣಿಸುವುದಾಗಿ ಹೇಳಿದೆ. ಜತೆಗೆ, ಇಂಥ ವ್ಯಕ್ತಿಗಳು ಗುಂಪುಗೂಡುವುದನ್ನು ತಡೆಯಲು ಸೆಕ್ಷನ್‌ 144 ಬಳಸುವಂತೆಯೂ ಸೂಚಿಸಿದೆ.

ಕೇಂದ್ರದಿಂದಲೂ ಬೆಂಬಲ: ಮರ್ಯಾದಾ ಹತ್ಯೆಗಳಿಂದ ದಂಪತಿಗಳಿಗೆ ರಕ್ಷಣೆ ಕೋರಿ ಶಕ್ತಿ ವಾಹಿನಿ ಎಂಬ NGO 2010ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ಇಂಥ ದಂಪತಿಗಳಿಗೆ ಆಯಾ ರಾಜ್ಯ ಸರ್ಕಾರಗಳು ರಕ್ಷಣೆ ಒದಗಿಸಬೇಕು. ಅಲ್ಲದೆ, ಬೆದರಿಕೆ ಎದುರಿಸುತ್ತಿರುವಂಥ ವ್ಯಕ್ತಿಗಳು ಆ ಕುರಿತು ದೂರು ನೀಡಬೇಕು ಎಂದು ಹೇಳಿತ್ತು. 

ಏನಿದು ಖಾಪ್‌ ಪಂಚಾಯತ್‌? ಒಂದು ಸಮುದಾಯ ಅಥವಾ ಜಾತಿಯನ್ನು ಪ್ರತಿನಿಧಿಸುವ ಸಮೂಹ ಇದಾಗಿದ್ದು, ಉತ್ತರ ಭಾರತದ ಬಹುತೇಕ ಗ್ರಾಮಗಳಲ್ಲಿ ಇವು ಅಸ್ತಿತ್ವದಲ್ಲಿವೆ. ಇವುಗಳು ಅರೆ – ನ್ಯಾಯಾಂಗ ಸಂಸ್ಥೆಗಳಂತೆ ವರ್ತಿಸುವುದಲ್ಲದೆ, ಹಲವು ಬಾರಿ ಪ್ರಾಚೀನ ಸಂಪ್ರದಾಯದ ಹೆಸರಲ್ಲಿ ಕಠಿಣ ಶಿಕ್ಷೆಗಳನ್ನೂ ಘೋಷಿಸಿದ್ದಿದೆ. ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನದಂಥ ರಾಜ್ಯಗಳಲ್ಲಿ ಖಾಪ್‌ ಪಂಚಾಯತ್‌ಗಳ ಪ್ರಭಾವ ಹೆಚ್ಚಿದ್ದು, ಪ್ರೇಮಿಗಳು, ಆಧುನಿಕ ಮನಸ್ಥಿತಿ ಹೊಂದಿರುವ ಯುವಜನರು, ಮಹಿಳೆಯರು ಇವುಗಳಿಂದ ಶಿಕ್ಷೆಗೆ ಒಳಗಾದ ಅನೇಕ ಪ್ರಕರಣಗಳು ವರದಿಯಾಗಿವೆ.

ಒಂದೇ ಗೋತ್ರದವರ ವಿವಾಹಕ್ಕೆ ಅವಕಾಶ ಇಲ್ಲ
ಸುಪ್ರೀಂಕೋರ್ಟ್‌ ತೀರ್ಪಿಗೆ ಖಾಪ್‌ ಪಂಚಾಯತ್‌ಗಳ ಮುಖ್ಯಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದೇ ಗೋತ್ರ ಅಥವಾ ಒಂದೇ ಗ್ರಾಮದವರ ನಡುವೆ ವಿವಾಹಕ್ಕೆ ಅವಕಾಶ ನೀಡುವುದಿಲ್ಲ. ಏಕೆಂದರೆ, ಇದು ಹಲವು ತಲೆಮಾರುಗಳಿಂದಲೂ ನಾವು ಆಚರಿಸಿಕೊಂಡು ಬಂದಿರುವಂಥ ಸಂಪ್ರದಾಯವಾಗಿದೆ ಎಂದು ಖಾಪ್‌ ನಾಯಕರು ಹೇಳಿದ್ದಾರೆ. ಜತೆಗೆ, ಪಂಜಾಯತ್‌ ಸಭೆ ಸೇರಿ ಈ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ.

Advertisement

ಕೆಲವು ಖಾಪ್‌ ತೀರ್ಪುಗಳು
– 2007 ರಲ್ಲಿ ಸಾಮಾಜಿಕ ಪದ್ಧತಿಗೆ ವಿರುದ್ಧವಾಗಿ ವಿವಾಹವಾದ ಜೋಡಿಯನ್ನು ಖಾಪ್‌ ಪಂಚಾಯತ್‌ ಆದೇಶದಂತೆ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹರ್ಯಾಣ ಹೈಕೋರ್ಟ್‌ ಐವರು ಆರೋಪಿಗಳಿಗೆ ಗಲ್ಲುಶಿಕ್ಷೆ ಮತ್ತು ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

– 2015ರ ಏಪ್ರಿಲ್‌ನಲ್ಲಿ ರಾಜಸ್ಥಾನದ ಮಹಿಳೆಯೊಬ್ಬಳ ಪತಿಯು ಇನ್ನೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ಓಡಿಹೋಗಿದ್ದ ಹಿನ್ನೆಲೆಯಲ್ಲಿ, ಆ ವ್ಯಕ್ತಿಯೊಂದಿಗೆ ಸಂಸಾರ ನಡೆಸುವಂತೆ ಮಹಿಳೆಗೆ ಖಾಪ್‌ ಪಂಚಾಯತ್‌ ಸೂಚಿಸಿತ್ತು.

– 2014ರಲ್ಲಿ ಉತ್ತರಪ್ರದೇಶದ ಖಾಪ್‌ ಪಂಚಾಯತ್‌, ಯುವತಿಯರು ಜೀನ್ಸ್‌ ಧರಿಸುವುದಕ್ಕೆ ಹಾಗೂ ಮೊಬೈಲ್‌ ಫೋನ್‌ ಬಳಸುವುದಕ್ಕೆ ನಿಷೇಧ ಹೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next