Advertisement
ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್, ಭಾರತದ ಶ್ರೇಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಮಹಾಭಿಯೋಗ ಪ್ರಕ್ರಿಯೆಗೆ ಒಳಪಡಿಸಿ ಪದಚ್ಯುತಿಗೊಳಿಸಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದೆ. ಇದಕ್ಕೇನು ಕಾರಣ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ. ಕೇಂದ್ರದಲ್ಲಿ ಹಾಗೂ ಬಹುತೇಕ ರಾಜ್ಯಗಳಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ, ವಿವಿಧ ಉಚ್ಚ ನ್ಯಾಯಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ತೆರವಾಗಿರುವ ಹುದ್ದೆಗಳಿಗೆ ಮಾಡಬೇಕಾಗಿರುವ ನೇಮಕಾತಿಯನ್ನು ತಡೆಹಿಡಿಯುವ ಮೂಲಕ ತನ್ನದೇ ಆಟವನ್ನು ಆಡುತ್ತಿದೆ. ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕಾತಿ ವಿಷಯದಲ್ಲಿ ಈಗ ನ್ಯಾಯಾಂಗವೇ ಪರಮಾಧಿಕಾರ ಹೊಂದಿದೆಯೆಂಬುದು ನಿಜವಾದರೂ, ಈ ಸತ್ಯವನ್ನು ಒಪ್ಪಿಕೊಳ್ಳಲು ಕಾರ್ಯಾಂಗ (ಸರಕಾರ) ಸಿದ್ಧವಿಲ್ಲ. ನ್ಯಾಯಮೂರ್ತಿಗಳ ನೇಮಕಾತಿ ಕುರಿತ ಜ್ಞಾಪನಪತ್ರವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಕುರಿತಂತೆ ಕೇಂದ್ರ ಸರಕಾರ ತೋರುತ್ತಿರುವ ನಿಷ್ಕ್ರಿಯ ಧೋರಣೆ, ನಮ್ಮ ನ್ಯಾಯಾಲಯಗಳನ್ನು ಅಕ್ಷರಶಃ ಸ್ತಂಭಿತಗೊಳಿಸಿದೆ. ನ್ಯಾಯಾಂಗ ಸಂಸ್ಥೆಯ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ಗಳೆರಡೂ ಅದೇ ರೀತಿ ಇತರ ವಿರೋಧ ಪಕ್ಷಗಳು ಕೂಡ ರಾಜಕೀಯ ಮಾಡುತ್ತಿವೆ!
Related Articles
Advertisement
ಕಾಂಗ್ರೆಸ್ ಪಕ್ಷ ಈಗ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಕೀಳುಗಳೆಯಲು, ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ “ಬಂಡಾಯ’ವನ್ನು ರಕ್ಷಾ ಕವಚ ವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬಂಥ ಮಾತುಗಳು ಕೇಳಿಬರುತ್ತಿವೆ. ಕಳೆದ ಜನವರಿಯಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲ ಮೇಶ್ವರ್, ರಂಜನ್ ಗೊಗೋಯ್, ಮದನ್ ಲೊಕೂರ್ ಹಾಗೂ ಕುರಿಯನ್ ಜೋಸೆಫ್ ಇವರುಗಳು ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಿಶ್ರಾ ಅವರ ಕಾರ್ಯ ವೈಖರಿಯನ್ನು ಹಾಗೂ ಸಹ ನ್ಯಾಯಮೂರ್ತಿಗಳಿಗೆ ಕೆಲಸವನ್ನು ಹಂಚುವ ಅವರ ಶೈಲಿಯನ್ನು ತೀವ್ರವಾಗಿ ಆಕ್ಷೇಪಿಸಿದ್ದರು. ನಮ್ಮ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಪತ್ರಿಕಾ ಗೋಷ್ಠಿ ನಡೆಸಿರುವುದು ಇದೇ ಮೊದಲ ಬಾರಿ. ಇಲ್ಲಿಯವರೆಗೂ ಶ್ರೇಷ್ಠ ನ್ಯಾಯಮೂರ್ತಿಗಳು “ತಪ್ಪಾಗಿ ನಡೆದುಕೊಂಡಿರುವುದಕ್ಕೆ’ ಅಥವಾ ಅವರಿಂದಾದ “ಅಧಿಕಾರ ದುರುಪಯೋಗ’ಕ್ಕೆ ಸಂಬಂಧಿ ಸಿದಂತೆ ಕಾಂಗ್ರೆಸ್ ಸಂಸದರು ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತ ಪಡಿಸಿದ್ದಿಲ್ಲ. ಆದರೆ ನ್ಯಾ| ಮಿಶ್ರಾ ಅವರು ಬಿಜೆಪಿಗೆ ಹಾಗೂ ನರೇಂದ್ರ ಮೋದಿ ಸರಕಾರಕ್ಕೆ ಹತ್ತಿರದವರು ಎನ್ನುವುದೇ ಕಾಂಗ್ರೆಸ್ ಪಕ್ಷಕ್ಕಿರುವ ತಕರಾರು ಎನ್ನಲಾಗುತ್ತಿದೆ. ಮುಖ್ಯ ನ್ಯಾಯಮೂರ್ತಿ ಗಳು ಈಗ ನಿರ್ವಹಿಸುತ್ತಿರುವ ರಾಮಜನ್ಮ ಭೂಮಿ, ಆಧಾರ್‌ಕಾರ್ಡ್ ಹಾಗೂ ಮಹಾರಾಷ್ಟ್ರದ ಜಿಲ್ಲಾ ನ್ಯಾಯಾಧೀಶ ಲೋಯಾ ಅವರ ಸಾವು – ಮುಂತಾದ ಸೂಕ್ಷ್ಮ ಹಾಗೂ ರಾಷ್ಟ್ರೀಯ ಪ್ರಾಮುಖ್ಯದ ಪ್ರಕರಣಗಳ ವಿಚಾರಣಾ ಪ್ರಕ್ರಿಯೆಗಳನ್ನು ಹಳ್ಳಹಿಡಿಸುವುದೇ ಇದರ ಹಿಂದಿನ ನಿಜವಾದ ಉದ್ದೇಶ. ನ್ಯಾಯ ಮೂರ್ತಿಯ ಪದಚ್ಯುತಿ ಪ್ರಯತ್ನ, ನ್ಯಾಯಾಂಗಕ್ಕೆ ಬೆದರಿಕೆ ಯೊಡ್ಡುವ ಹಾಗೂ ಅದರ ನೈತಿಕತೆಯನ್ನು ಧ್ವಂಸಗೊಳಿಸುವ ತಂತ್ರವೂ ಆಗಿದೆಯೆಂಬಂಥ ಮಾತುಗಳೂ ಕೇಳಿ ಬಂದಿವೆ.
ಹಾಗೆ ನೋಡಿದರೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಹಾಗೂ ಅವರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಡ್ತಿ ನೀಡುವ ಪ್ರಕ್ರಿಯೆಗಳಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷದ ಪಾತ್ರವೂ ಇತ್ತು. ಎರಡೂ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ಪಕ್ಷವಾಗಿತ್ತು ಎಂಬುದನ್ನು ಅಗತ್ಯವಾಗಿ ಗಮನಿಸಬೇಕು. “ಸರಿಯಾದ ಸಂಪರ್ಕ ಸಂಬಂಧ’ ಹೊಂದಿರುವ ಅನೇಕ ನ್ಯಾಯಮೂರ್ತಿಗಳ ಪೈಕಿ ದೀಪಕ್ ಮಿಶ್ರಾ ಕೂಡ ಒಬ್ಬರು. ಭಾರತದ ಇನ್ನೋರ್ವ ಶ್ರೇಷ್ಠ ನ್ಯಾಯಮೂರ್ತಿಯಾಗಿದ್ದ ರಂಗನಾಥ ಮಿಶ್ರಾ ಅವರ ಅಣ್ಣನ ಮಗ ಈ ದೀಪಕ್ ಮಿಶ್ರಾ. ರಾಜಕೀಯ ಪ್ರವೇಶಿಸಿ ಸಂಸತ್ ಸದಸ್ಯರಾದ ದೇಶದ ಕೆಲವೇ ಮಂದಿ ಶ್ರೇಷ್ಠ ನ್ಯಾಯಮೂರ್ತಿಗಳಲ್ಲಿ ರಂಗನಾಥ ಮಿಶ್ರಾ ಅವರೂ ಒಬ್ಬರು. ನಿವೃತ್ತರಾದ ಬಳಿಕ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ರಾಜ್ಯಸಭಾ ಸದಸ್ಯ ರಾದರು. ನ್ಯಾಯಾಂಗದಲ್ಲಿನ ತಮ್ಮ ದಾಖಲೆಯನ್ನವರು ರಾಜಕೀಯ ಪ್ರವೇಶದ ಮೂಲಕ ಹಾಳುಗೆಡವಿಕೊಂಡರು ಎಂದೂ ಹೇಳಬಹುದಾಗಿದೆ.
ಭಾರತದ ಇನ್ನೋರ್ವ ಶ್ರೇಷ್ಠ ನ್ಯಾಯ ಮೂರ್ತಿಯಾಗಿದ್ದ ಕೆ. ಸುಬ್ಬರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ (1967)ಡಾ| ಝಾಕಿರ್ ಹುಸೇನ್ ಅವರೆ ದುರು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ನಿಂತು ಸೋತ ರಾದರೂ ಮುಂದೆ ರಾಜಕೀಯದಿಂದ ದೂರವೇ ಉಳಿದರು. ಒಂದು ಮಾತು. ಉಚ್ಚ ನ್ಯಾಯಾಲಯಗಳ ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಸಾರ್ವಜನಿಕ ವ್ಯವಹಾರದಿಂದ ದೂರ ಉಳಿಯ ಬೇಕೆಂದು ನಿರೀಕ್ಷಿಸುವಂತಿಲ್ಲ. ಸರ್ವೋಚ್ಚ ನ್ಯಾಯಾಲಯದ ಭೂತಪೂರ್ವ ನ್ಯಾಯ ಮೂರ್ತಿಯಾದ ವಿ.ಆರ್. ಕೃಷ್ಣ ಅಯ್ಯರ್, ಎಂ. ರಾಮಾ ಜೋಯಿಸ್, ರತ್ನವೇಲ್ ಪಾಂಡಿಯನ್ ಹಾಗೂ ವಿ. ಗೋಪಾಲ ಗೌಡರಂಥ ಕೆಲವರು ರಾಜಕೀಯದಲ್ಲಿದ್ದವರೇ; ನ್ಯಾಯ ಮೂರ್ತಿಯಾಗುವುದಕ್ಕೆ ಮುನ್ನ ಸಚಿವ ಹುದ್ದೆಗಳಲ್ಲೂ ಇದ್ದವರೇ. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಸರ್. ಎಂ.ಆರ್. ಜಯಕರ್ ಅವರು ಪ್ರೈವಿ ಕೌನ್ಸಿಲ್ (ಇಂಗ್ಲೆಂಡ್‌ನಲ್ಲಿ)ನ ಹಾಗೂ ಭಾರತದ ಫೆಡರಲ್ ಕೋರ್ಟಿನ ಸದಸ್ಯರಾಗುವ ಮುನ್ನ ಹಿಂದೂ ಮಹಾಸಭಾದ ನೇತಾರರಾಗಿದ್ದವರು. ಇದೇ ರೀತಿ ಪಾಕಿಸ್ಥಾನದ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ. ಜಾಫರುಲ್ಲಾ ಖಾನ್ ಅವರೂ ಫೆಡರಲ್ ಕೋರ್ಟಿನ ಸದಸ್ಯರಾಗುವುದಕ್ಕೆ ಮೊದಲು ರಾಜಕೀಯ ರಂಗದಲ್ಲಿದ್ದವರೇ. ಕುತೂಹಲಕಾರಿ ಸಂಗತಿಯೆಂದರೆ ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಮನವಿಗೆ ಸಹಿ ಹಾಕಿರುವವರಲ್ಲಿ ನ್ಯಾಯವಾದಿ ಕಪಿಲ್ ಸಿಬಲ್ ಕೂಡ ಸೇರಿದ್ದಾರೆ. ಅಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ವಿ. ರಾಮಸ್ವಾಮಿ ಅವರ ವಿರುದ್ಧ ಪದಚ್ಯುತಿ ಪ್ರಯತ್ನ ನಡೆದಾಗ ಇದೇ ಕಪಿಲ್ ಸಿಬಲ್ ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಗಮನಿಸಬೇಕಾದ ಇನ್ನೊಂದು ಅಂಶವಿದೆ – ಭಾರತದ ನ್ಯಾಯವಾದಿಗಳ ಸಂಘ ಸಂಸತ್ ಸದಸ್ಯರು ಹಾಗೂ ಶಾಸಕರುಗಳಿಗೆ ನ್ಯಾಯವಾದಿಗಳಾಗಿಯೂ ಸೇವೆ ಸಲ್ಲಿಸುವ ಅವಕಾಶ ನೀಡಿದೆ. ಆದರೆ ಅವರು (ನ್ಯಾಯಾಧೀಶರುಗಳ) ಪದಚ್ಯುತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ರಾಮಜನ್ಮಭೂಮಿ ಪ್ರಕರಣ ದಲ್ಲಿ ಮುಸ್ಲಿಂ ಕಕ್ಷಿದಾರರೊಬ್ಬರ ಪರವಾಗಿ ವಿಚಾರಣೆಯಲ್ಲಿ ಹಾಜರಾಗಬೇಡಿರೆಂದು ಕಪಿಲ್ ಸಿಬಲ್ ಅವರಿಗೆ ಕಾಂಗ್ರೆಸ್ ಪಕ್ಷ ನಿರ್ದೇಶವಿತ್ತಿರುವುದರಲ್ಲಿ ಅರ್ಥವಿಲ್ಲದೆ ಇಲ್ಲ. ಉನ್ನತ ನ್ಯಾಯಾಲಯಗಳ ಮೇಲೆ ಬಿದ್ದಿರುವ ಪ್ರಹಾರದಲ್ಲಿ ಮೋದಿ ಸರಕಾರದ ಪಾತ್ರದ ಕುರಿತು ಹೇಳುವುದಾದರೆ ತನಗೆ “ಬದ್ಧತೆಯಿರುವ ನ್ಯಾಯಮೂರ್ತಿಗಳು’ ಬೇಕು ಎಂಬ ತನ್ನ ಮನದಿಂಗಿತವನ್ನು ಅದು ಸ್ಪಷ್ಟವಾಗಿ ಹೇಳಬೇಕಾದ ಕಾಲ ಬಂದಿದೆ. ಬದ್ಧತೆ ಎಂಬುದರ ಅರ್ಥ ಬಿಜೆಪಿ ಅಥವಾ ಆರೆಸ್ಸೆಸ್ ಸಿದ್ಧಾಂತಕ್ಕೆ ಬದ್ಧತೆ! ಕಾಂಗ್ರೆಸ್ ಅಥವಾ ಕಮ್ಯುನಿಸ್ಟ್ ನ್ಯಾಯ ಮೂರ್ತಿ ಗಳಿರುವತ್ತ, ಸಂಘ ಪರಿವಾರದ ನ್ಯಾಯಮೂರ್ತಿಗಳೇಕೆ ಇರಬಾರದು ಎಂಬ ವಾದಕ್ಕೂ ಇಲ್ಲಿ ಅವಕಾಶವಿದೆ! ಆದರೆ ನ್ಯಾಯಮೂರ್ತಿಗಳಾದವರು ಒಳ್ಳೆಯವರಾಗಿರಬೇಕು; ಜ್ಞಾನ ಸಂಪನ್ನರಾಗಿರಬೇಕು ಹಾಗೂ ನಿಷ್ಪಕ್ಷಪಾತಿಗಳಾಗಿರ ಬೇಕು ಎಂಬುದೇ ಜನರ ನಿರೀಕ್ಷೆ. ಕನಿಷ್ಠ ಇಂದಿರಾ ಗಾಂಧಿಯವರ ಕಾಲದಲ್ಲಾದರೂ ಕಾಂಗ್ರೆಸ್‌ಗೆ ಬದ್ಧರಾದ ನ್ಯಾಯಮೂರ್ತಿಗಳ ನೇಮಕವೇ ಆಗಲೆಂಬ ಸರಳ, ಸ್ಪಷ್ಟ ನಿಲುವಿತ್ತು. ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವರುಗಳಾದ ಎಚ್.ಆರ್. ಗೋಖಲೆ ಹಾಗೂ ಮೋಹನ್ ಕುಮಾರ್ ಮಂಗಲಂ “ಬದ್ಧತೆಯುಳ್ಳ ನ್ಯಾಯಾಂಗ’ ಕುರಿತಂತೆ ಬಹಿರಂಗ ವಾಗಿಯೇ ಮಾತನಾಡುತ್ತಿದ್ದರು. ಈ ನಡುವೆ ಇನ್ನೊಂದು ಮಾತೂ ಕೇಳಿ ಬಂದಿದೆ. ಕೇಂದ್ರದ ಇಬ್ಬರು ಮಾಜಿ ಸಚಿವರುಗಳಾದ ಪಿ.ಶಿವಶಂಕರ್ ಹಾಗೂ ಎಚ್.ಆರ್. ಭಾರದ್ವಾಜ್ ತಮಗೆ ಬೇಕಿದ್ದವರನ್ನು ಉನ್ನತ ನ್ಯಾಯಾಲಯಕ್ಕೆ ತುರುಕ ಬೇಕೆಂದಿದ್ದರು; ಇಂಥದೊಂದು ಕಾರಣದಿಂದಲೇ ಕೊಲಿ ಜಿಯಂ (ನೇಮಕಾತಿ ಮಂಡಳಿ) ವ್ಯವಸ್ಥೆಯನ್ನು ಅಳವಡಿಸಿ ಕೊಳ್ಳಬೇಕೆಂಬ ಒತ್ತಡಕ್ಕೆ ಸರ್ವೋಚ್ಚ ನ್ಯಾಯಾಲಯ ಒಳಗಾಗ ಬೇಕಾಗಿ ಬಂತು ಎಂಬ ಮಾತದು. ಉನ್ನತ ಸ್ಥಾನಗಳಲ್ಲಿ ವಿವಿಧ ತೆರನ ಅಭಿಪ್ರಾಯಗಳನ್ನು ಹೊಂದಿರುವ ಜನರನ್ನು ಇರಿಸಿ ಕೊಳ್ಳಬೇಕೆಂಬ ಪಾಠವನ್ನು ಬಿಜೆಪಿ ಸರಕಾರ ಕಲಿಯಬೇಕಾಗಿದೆ. 2016ರಲ್ಲಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾದ ಕ್ರಮವನ್ನು ರದ್ದುಪಡಿಸಿ ತೀರ್ಪು ನೀಡಿದ್ದ ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೆ.ಎಂ. ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡುವ ವಿಷಯದಲ್ಲಿ ಬಿಜೆಪಿ ಸರಕಾರ ತೋರಿರುವ ನಿಷ್ಕ್ರಿಯತೆ ಒಂದು ಪ್ರತೀಕಾರದ ಕ್ರಮವೇ ವಿನಾ ಇನ್ನೇನಲ್ಲ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂನ ಇನ್ನೊಂದು ಶಿಫಾರಸನ್ನೂ ಸರಕಾರ ಬದಿಗೆ ಸರಿಸಿ ಕುಳಿತುಕೊಂಡಿದೆ. ಇಂದೂ ಮಲ್ಹೋತ್ರಾ ಅವರ ನೇಮಕಾತಿಗೆ ಸಂಬಂಧಿಸಿದ ಶಿಫಾರಸು ಇದು. ಒಂದು ವೇಳೆ ಇಂದೂ ಮಲ್ಹೋತ್ರಾ ಅವರು ನೇಮಕಗೊಂಡರೆ ಸರ್ವೋಚ್ಚ ನ್ಯಾಯಾಲಯಕ್ಕೆ ನೇರವಾಗಿ ನೇಮಕಗೊಳ್ಳುವ ಪ್ರಥಮ ಮಹಿಳಾ ನ್ಯಾಯವಾದಿ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ (ನೇಮಕ ಮಂಡಳಿ)ಗೆ ಅಸಹಕಾರ ತೋರಿಸುವ ಮೂಲಕ ಕೇಂದ್ರ ಸರಕಾರ ನ್ಯಾಯಾಂಗವನ್ನು ತನ್ನ ಒತ್ತೆ ಸೆರೆಯಾಳಾಗಿ ಇರಿಸಿಕೊಳ್ಳುವಂತಿಲ್ಲ.