ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧಿಕರಣ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೋಮವಾರ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ಜುಲೈ ತಿಂಗಳ ನೀರು ಹರಿಸುವಂತೆ ಹೇಳಿದೆ. ಜುಲೈ ತಿಂಗಳಿನಲ್ಲಿ ಕರ್ನಾಟಕ 34ಟಿಎಂಸಿ ನೀರು ಬಿಡಬೇಕೆಂದು ತಿಳಿಸಿತ್ತು. ಇಂದು ಎಷ್ಟು ಪ್ರಮಾಣದ ನೀರು ಬಿಡಬೇಕೆಂದು ಪ್ರಾಧಿಕಾರ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ವರದಿ ಹೇಳಿದೆ.
ಏತನ್ಮಧ್ಯೆ ಕರ್ನಾಟಕ ಈಗಾಗಲೇ ಜೂನ್ ತಿಂಗಳಿನಲ್ಲಿ ನಿಗದಿಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ಸುಮಾರು 2.5ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡಲಾಗಿದೆ. ಹೀಗಾಗಿ ಕೇಂದ್ರ ಜಲ ಆಯೋಗದಿಂದ ಅಂಕಿ-ಅಂಶ ಪಡೆದು ನೀರನ್ನು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಕರ್ನಾಟಕ ತಿಳಿಸಿದೆ.
ಅವ್ರು ಹೇಳಿದ್ರೆ, ಬಿಡೋದಿಕ್ಕೆ ನೀರು ಬೇಡ್ವೇ:ಡಿಕೆಶಿ
ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಡಿಕೆ ಶಿವಕುಮಾರ್, ತರಾತುರಿಯಲ್ಲಿ ನಾನು ಏನನ್ನೂ ಹೇಳೋದಿಲ್ಲ. ತಮಿಳುನಾಡು ಅಗತ್ಯಕ್ಕಿಂತ ಹೆಚ್ಚು ನೀರಿನ ಬೇಡಿಕೆ ಇಟ್ಟಿದೆ. ಅವ್ರು ಹೇಳಿದ ಕೂಡಲೇ ಬಿಡೋದಕ್ಕೆ ನೀರು ಬೇಕಲ್ವಾ ಎಂದು ಪ್ರಶ್ನಿಸಿದರು.