ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಇ.ಡಿ) ಮುಖ್ಯಸ್ಥ ಎಸ್.ಕೆ.ಮಿಶ್ರಾ ಅವರ ಅಧಿಕಾರವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಜುಲೈ 31ರ ಬದಲಿಗೆ ಸಪ್ಟೆಂಬರ್ 15ರವರೆಗೆ ಸಂಜಯ್ ಕುಮಾರ್ ಮಿಶ್ರಾ ಅವರು ಇ.ಡಿ ಮುಖ್ಯಸ್ಥನ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಸರ್ವೋಚ್ಛ ನ್ಯಾಯಾಲಯವು ಹೇಳಿದೆ.
ಎಸ್.ಕೆ ಮಿಶ್ರಾ ಅವರ ಅನುಪಸ್ಥಿತಿಯು ಸದ್ಯ ನಡೆಯುತ್ತಿರುವ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಗೆ ಹಿನ್ನಡೆಯಾಗುವ ಕಾರಣ, ದೇಶದ ಹಿತದೃಷ್ಟಿಯ ಕಾರಣದಿಂದ ಎಸ್.ಕೆ ಮಿಶ್ರಾ ಅವರನ್ನು ಅಕ್ಟೋಬರ್ 15ರವರೆಗೆ ಮುಂದುವರಿಯಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು.
ಕೇವಲ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಕೇಂದ್ರದ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಸಮಯದಲ್ಲಿ ಹೇಳಿದೆ.
ಇದನ್ನೂ ಓದಿ:ಒಂದೇ ದಿನ, ಒಂದೇ ಟೈಟಲ್‌ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್: ಏನಿದು ʼಜೈಲರ್ʼ ವಿವಾದ
ಜುಲೈ 11ರಂದು ಇದೇ ವಿಚಾರದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂಜಯ್ ಕುಮಾರ್ ಮಿಶ್ರಾ ಅವರನ್ನು ಮೂರನೇ ಅವಧಿಗೆ ಇ.ಡಿ ಮುಖ್ಯಸ್ಥರಾಗಿ ಮುಂದುವರಿಸುವುದು ಕಾನೂನು ಬಾಹಿರ ಎಂದು ಹೇಳಿತ್ತು. ಆದರೂ ಜುಲೈ 31ರವರೆಗೆ ಮುಂದುವರಿಸಲು ಅವಕಾಶ ನೀಡಲಾಗಿತ್ತು.
ಇ.ಡಿ ಮುಖ್ಯಸ್ಥರ ಅವಧಿ ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವು ಬುಧವಾರ ತುರ್ತು ಅರ್ಜಿ ಸಲ್ಲಿಸಿತ್ತು.