Advertisement

ಶಬರಿಮಲೆ ತೀರ್ಪು: ಮರುಪರಿಶೀಲನೆಗೆ ಸು.ಕೋರ್ಟ್‌ ಒಪ್ಪಿಗೆ

04:45 AM Nov 14, 2018 | Team Udayavani |

ಹೊಸದಿಲ್ಲಿ/ತಿರುವನಂತಪುರ: ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ಸಂಬಂಧ ಸೆ.28ರಂದು ತಾನೇ ನೀಡಿದ್ದ ತೀರ್ಪಿನ ಮರುಪರಿಶೀಲನೆ ಮಾಡಲು ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ. ಜ.22ರಂದು ‘ಮುಕ್ತ ನ್ಯಾಯಾಲಯ’ದಲ್ಲೇ ವಿಚಾರಣೆ ನಡೆಸುವುದಾಗಿ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪಂಚ ಪೀಠ ಹೇಳಿದೆ. ಆದರೆ ಸೆ.28ರ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದೂ ತಿಳಿಸಿದೆ.

Advertisement

ಸುಪ್ರೀಂನ ಆದೇಶ ಹೊರಬಿದ್ದ ಕೂಡಲೇ ಕೇರಳಾದ್ಯಂತ ಸಂತಸ ಮನೆ ಮಾಡಿದೆೆ. ಅಯ್ಯಪ್ಪ ಸ್ವಾಮಿ ದೇಗುಲದ ಮುಖ್ಯ ತಂತ್ರಿ ಕಂಡರಾರು ರಾಜೀವರಾರು ಪ್ರತಿಕ್ರಿಯಿಸಿ, ಇದೊಂದು ಅತ್ಯುತ್ತಮ ತೀರ್ಮಾನ. ಅಯ್ಯಪ್ಪ ಸ್ವಾಮಿ ನಮಗೆ ಸಹಾಯ ಮಾಡಿದ್ದಾನೆ ಎಂದಿದ್ದಾರೆ. ಮಂಗಳವಾರದ ಆದೇಶವನ್ನು ಸ್ವಾಗತಿಸುವುದಾಗಿ ಹೇಳಿರುವ ಸಾಮಾಜಿಕ ಕಾರ್ಯಕರ್ತ ರಾಹುಲ್‌ ಈಶ್ವರ್‌, ಜ.22ರ ವರೆಗೆ ದೇಗುಲಕ್ಕೆ 10ರಿಂದ 50 ವರ್ಷ ವಯಸ್ಸಿನೊಳಗಿನ ಯಾವುದೇ ಮಹಿಳೆಯನ್ನು ಬಿಡದಂತೆ ಬಾಗಿಲಲ್ಲೇ ಕಾಯುತ್ತೇನೆ ಎಂದೂ ಹೇಳಿದ್ದಾರೆ.

ಮಂಗಳವಾರ ಅಪರಾಹ್ನ ಕೊಠಡಿಯಲ್ಲೇ ವಿಚಾರಣೆ ನಡೆಸಿದ ಸಿಜೆಐ ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ಆರ್‌.ಎಫ್. ನಾರಿಮನ್‌, ಎಂ.ಎಂ.ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌ ಮತ್ತು ಇಂದು ಮಲ್ಹೋತ್ರ ಅವರಿದ್ದ ಪಂಚ ಪೀಠವು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ (ಎನ್‌ಎಡಿಎ), ನಾಯರ್‌ ಸೇವಾ ಸಮಾಜ (ಎನ್‌ಎಸ್‌ಎಸ್‌) ಸಹಿತ 49 ಸಂಘಟನೆಗಳು, ವ್ಯಕ್ತಿಗಳು ಸಲ್ಲಿಸಿದ್ದ ಮರುಪರಿಶೀಲನ ಅರ್ಜಿಗಳನ್ನು ಸ್ವೀಕರಿಸಿತು. ಜ.22ರಿಂದ ಸೂಕ್ತ ಪೀಠದಿಂದ ಈ ಬಗ್ಗೆ ವಿಚಾರಣೆ ನಡೆಯಲಿದೆ ಎಂದೂ ಹೇಳಿದೆ. ಆದರೆ ಈ ಬಳಿಕವಷ್ಟೇ ರಿಟ್‌ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದೆ.

ಬಿಜೆಪಿ, ಕಾಂಗ್ರೆಸ್‌ ಸ್ವಾಗತ
ಮಹಿಳೆಯರು ದೇಗುಲ ಪ್ರವೇಶ ಮಾಡದಂತೆ ಪ್ರತಿಭಟನೆ ನಡೆಸಿರುವ ಬಿಜೆಪಿ ಸುಪ್ರೀಂ ಆದೇಶವನ್ನು ಸ್ವಾಗತಿಸಿದೆ. ಕಾಂಗ್ರೆಸ್‌ ಕೂಡ ತೀರ್ಪನ್ನು ಸ್ವಾಗತಿಸಿದ್ದು, ಕೇರಳ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪ್ರವೇಶಿಸುವೆ: ತೃಪ್ತಿ; ಬಿಡಲ್ಲ: ರಾಹುಲ್‌
ದೇಶದಲ್ಲಿನ ವಿವಿಧ ದೇಗುಲಗಳಲ್ಲಿನ ಪ್ರವೇಶಕ್ಕಾಗಿ ಹೋರಾಟ ನಡೆಸುತ್ತಿರುವ ತೃಪ್ತಿ ದೇಸಾಯಿ ಅವರು ನ.17ರಿಂದ ನ.20ರ ಒಳಗೆ ಒಂದು ದಿನ ದೇಗುಲ ಪ್ರವೇಶ ಮಾಡುವುದಾಗಿ ಹೇಳಿಕೊಂಡಿದ್ದಾರೆ. ದೇಗುಲ ಪ್ರವೇಶ ಮಾಡದಂತೆ ಪ್ರತಿಭಟನೆಗಳ ಮೂಲಕ ತಡೆದಿರುವ ಹೋರಾಟಗಾರ ರಾಹುಲ್‌ ಈಶ್ವರ್‌ ಇದಕ್ಕೆ ಪ್ರತಿಕ್ರಿಯಿಸಿ, ಜ.22ರವರೆಗೆ ದೇಗುಲದ ಬಾಗಿಲಲ್ಲೇ ಕಾಯುವುದಾಗಿ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಎರಡು ತಿಂಗಳ ಅವಧಿಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುವುಮಾಡಿಕೊಡುವುದಿಲ್ಲ. ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತೇವೆ ಎಂದಿದ್ದಾರೆ.

Advertisement

ಕಾನೂನು ತಜ್ಞರೊಂದಿಗೆ ಚರ್ಚೆ
ಸುಪ್ರೀಂ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸರಕಾರ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದೆ. ಸೆ.28ರ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಿರಾಕರಿಸಿದೆ. ಆದರೆ ಮರುಪರಿಶೀಲನ ಅರ್ಜಿಗಳ ವಿಚಾರಣೆಗೂ ಅದು ಒಪ್ಪಿಗೆ ನೀಡಿದೆ. ಹೀಗಾಗಿ ಮುಂದೇನು ಮಾಡಬೇಕು ಎಂಬ ಬಗ್ಗೆ ಕಾನೂನು ಪರಿಣತರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. 

ನ.17ಕ್ಕೆ ತೆರೆಯಲಿದೆ ಬಾಗಿಲು
ನ.17ರಂದು ಶಬರಿಮಲೆ ದೇಗುಲದ ಬಾಗಿಲು ತೆರೆಯಲಿದೆ. ಮಂಡಲ ಪೂಜೆ ಮತ್ತು ಮಕರ ಸಂಕ್ರಾಂತಿ ಪ್ರಯುಕ್ತ ಎರಡು ತಿಂಗಳುಗಳವರೆಗೆ, ಅಂದರೆ ಜ.21ರವರೆಗೆ ಬಾಗಿಲು ತೆರೆದಿರಲಿದೆ. ಈ ಸಂದರ್ಭದಲ್ಲೇ ದೇಗುಲ ಪ್ರವೇಶಕ್ಕಾಗಿ ಒಟ್ಟು 550 ಮಹಿಳೆಯರು ದರ್ಶನಕ್ಕಾಗಿ ಆನ್‌ಲೈನ್‌ ಬುಕಿಂಗ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next