ನವದೆಹಲಿ: ತಾನು ರಾಷ್ಟ್ರಪತಿಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೋಹ್ಲಿ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿಯು ಕ್ಷುಲ್ಲಕವಾಗಿದ್ದು, ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಇತ್ತೀಚೆಗೆ ನಡೆದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕಿಶೋರ್ ಜಗನ್ನಾತ್ ಸಾವಂತ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಮುಂದಿನ ದಿನಗಳಲ್ಲಿ ಇದೇ ರೀತಿಯ ವಿಷಯಗಳ ಬಗ್ಗೆ ಅವರ ಮುಂದಿನ ಅರ್ಜಿಗಳನ್ನು ಪರಿಗಣಿಸದಂತೆ ರಿಜಿಸ್ಟ್ರಿಗೆ ಸೂಚಿಸಿದೆ. ಅಲ್ಲದೇ ಅರ್ಜಿದಾರರು ಉಪಯೋಗಿಸಿರುವ ಕೀಳು ಪದಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಸೂಚಿಸಿದೆ.
ಅರ್ಜಿಯಲ್ಲಿ ತಮ್ಮನ್ನು ಪರಿಸರ ತಜ್ಞ ಎಂದು ಉಲ್ಲೇಖಿಸಿರುವ ಅವರು, ವಿಶ್ವದ ಎಲ್ಲಾ ಗೊಂದಲಮಯ ಪರಿಸ್ಥಿತಿಗಳನ್ನು ಸರಿಪಡಿಸಲು ಹೋರಾಡುವುದಾಗಿ ಹೇಳಿಕೊಂಡಿದ್ದಾರೆ.