Advertisement

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂಗೆ ಪರಮಾಧಿಕಾರ: ಅರುಣ್ ಸಿಂಗ್

01:52 PM Oct 17, 2022 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಇದರಲ್ಲಿ ಸಿಎಂ ಅವರದೇ ಪರಮಾಧಿಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.

Advertisement

ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, 18 ರಾಜ್ಯಗಳಲ್ಲಿ ಸರಕಾರವಿದೆ. ಪಕ್ಷಕ್ಕೆ ಸಂಬಂಧಿಸಿ ರಾಜ್ಯ- ಕೇಂದ್ರೀಯ ಚುನಾವಣಾ ಸಮಿತಿಗಳೂ ಇವೆ. ಅಭ್ಯರ್ಥಿ ಆಯ್ಕೆಯಂಥ ವಿಚಾರದಲ್ಲಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಚುನಾವಣಾ ಅಧಿಸೂಚನೆ ಹೊರಬಿದ್ದಾಗ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದರು.

ಯತ್ನಾಳ್ ಅವರ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ನೀವು ಕ್ರಮ ಕೈಗೊಳ್ಳಲು ಬಯಸುತ್ತೀರಾ? ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು. ಬೆಳಗಾವಿಯ ಬಿಜೆಪಿಯಲ್ಲಿ ಯಾವುದೇ ಜಗಳಗಳಿಲ್ಲ; ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಇಂದು ಸಮ್ಮಾನನಿಧಿ ಬಿಡುಗಡೆಯಾಗಿದೆ. ರಾಜ್ಯದ ಲಕ್ಷಾಂತರ ಮತ್ತು ದೇಶದ ಕೋಟ್ಯಂತರ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅರ್ಹ ರೈತರಿಗೆ ತಲಾ 10 ಸಾವಿರ ರೂಪಾಯಿ ಸಿಗುತ್ತಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಈ ಹಣ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಬಡವರ ಮನೆಗಳಲ್ಲಿ ಹಲವು ದಶಕಗಳಲ್ಲಿ ಗ್ಯಾಸ್ ಸಂಪರ್ಕ ಇರಲಿಲ್ಲ. ಮೋದಿಜಿ ಗ್ಯಾಸ್ ಸಂಪರ್ಕ ಕೊಡುವ ಕಾರ್ಯ ಮಾಡಿದ್ದು, ಮಹಿಳೆಯರಿಗೆ ಇದರಿಂದ ಸಂತಸವಾಗಿದೆ ಎಂದು ವಿವರಿಸಿದರು.

Advertisement

ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡ ಫಲಾನುಭವಿಗಳೂ ಪ್ರಧಾನಿಗೆ ಧನ್ಯವಾದ ಹೇಳುತ್ತಿದ್ದಾರೆ. ಕೋವಿಡ್ ಅವಧಿಯಲ್ಲಿ ಕೋಟಿಗಟ್ಟಲೆ ಜನರಿಗೆ ಉಚಿತ ಪಡಿತರ ನೀಡಿ ಜೀವ ಉಳಿಸುವ ಕಾರ್ಯ ಮಾಡಿದ ಬಿಜೆಪಿಯ ಕೇಂದ್ರ- ರಾಜ್ಯ ಸರಕಾರಕ್ಕೆ ಜನರು ಕೃತಜ್ಞತೆ ಹೇಳುತ್ತಿದ್ದಾರೆ. ಚಿಕ್ಕೋಡಿ ಮತ್ತು ಈ ಭಾಗದಲ್ಲಿ ಜನರು ಬಿಜೆಪಿ ಶಾಸಕರನ್ನೇ ಚುನಾಯಿಸುವ ದಿನ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ಜನರಿಗೆ ಕೇವಲ ವಿಶ್ವಾಸಘಾತುಕತನದ ಕೆಲಸ ಮಾಡಿತ್ತು. ಆದ್ದರಿಂದ ಅವರಿಗೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಫಲಾನುಭವಿಗಳ ಜೊತೆ ಮಾತನಾಡುವ ಧೈರ್ಯ ಇರಲಿಲ್ಲ. ಗ್ಯಾಸ್ ಸಂಪರ್ಕ, ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿಯಂಥ ಜನೋಪಯೋಗಿ ಕಾರ್ಯಗಳನ್ನು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಪ್ರಶ್ನಿಸುವ ಕಾಲ ಬಂದಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next