Advertisement

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

11:30 PM Apr 22, 2021 | Team Udayavani |

ಹೊಸದಿಲ್ಲಿ: “ದೇಶದ ಪ್ರಸ್ತುತ ಸ್ಥಿತಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಆಮ್ಲಜನಕ ಪೂರೈಕೆ, ಅಗತ್ಯ ಔಷಧ ಹಾಗೂ ಲಸಿಕೆ ವಿತರಣೆ ವಿಧಾನದ ಕುರಿತ “ರಾಷ್ಟ್ರೀಯ ಯೋಜನೆ’ಯನ್ನು ಕೂಡಲೇ ನಮ್ಮ ಮುಂದಿರಿಸಿ…’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿದ ಕಟ್ಟಪ್ಪಣೆಯಿದು.

Advertisement

ದೇಶವು ದಾಖಲೆಯ 3.14 ಲಕ್ಷ ಸೋಂಕು ಹಾಗೂ 2,104 ಸಾವಿಗೆ ಸಾಕ್ಷಿಯಾದ ಗುರುವಾರ, ಕೋವಿಡ್ ಕಳವಳಕಾರಿ ಸ್ಥಿತಿಯ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಈ ರೀತಿಯ ಆದೇಶ ನೀಡಿದೆ. ಜತೆಗೆ, ವಿಚಾರಣೆ ವೇಳೆ ತನಗೆ ನೆರವಾಗಲು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ. ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ.

4 ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕು: ಸೋಂಕಿನಿಂದ ದೇಶವು ತತ್ತರಿಸಿಹೋಗಿದೆ. ಕನಿಷ್ಠ 6 ಹೈಕೋರ್ಟ್‌ಗಳು ಕೋವಿಡ್ ಸಂಬಂಧಿತ ಸಂಪನ್ಮೂಲಗಳ ಕುರಿತು ವಿಚಾರಣೆ ನಡೆಸುತ್ತಿವೆ. ದೆಹಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕಲ್ಕತ್ತಾ ಮತ್ತು ಅಲಹಾಬಾದ್‌ ಹೈಕೋರ್ಟ್‌ಗಳು ಪ್ರಸ್ತುತ ಪರಿಸ್ಥಿತಿಯನ್ನು ಅರಿತು ತಮ್ಮಿಂದಾಗುವಷ್ಟು ಕೆಲಸವನ್ನು ಮಾಡುತ್ತಿವೆ. ನಮಗೆ ಈಗ 4 ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕು. ಆಕ್ಸಿಜನ್‌ ಪೂರೈಕೆ, ಅತ್ಯವಶ್ಯಕ ಔಷಧಗಳ ಸರಬರಾಜು, ಲಸಿಕೆ ವಿತರಣೆಯ ವಿಧಾನ ಹಾಗೂ ಲಾಕ್‌ಡೌನ್‌ ಘೋಷಿಸುವ ಅಧಿಕಾರದ ಬಗ್ಗೆ “ರಾಷ್ಟ್ರೀಯ ಯೋಜನೆ’ ಸಿದ್ಧಪಡಿಸಿ ನಮ್ಮ ಮುಂದಿಡಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎಲ್‌.ಎನ್‌.ರಾವ್‌, ಎಸ್‌.ಆರ್‌. ಭಟ್‌ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. ಲಾಕ್‌ಡೌನ್‌ ಘೋಷಿಸುವ ಅಧಿಕಾರವಿರುವುದು ಸರಕಾರಗಳಿದೇ ವಿನಾ ಕೋರ್ಟ್‌ಗಳಿಗಲ್ಲ ಎಂದೂ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಆಮ್ಲಜನಕ, ರೆಮ್‌ಡೆಸಿವಿಯರ್‌ ಔಷಧದ ಕೊರತೆ ಕುರಿತು ಆರೋಪಗಳು ಕೇಳಿಬಂದಿರುವ ನಡುವೆ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಬುಧವಾರ ತಡರಾತ್ರಿ ಆಮ್ಲಜನಕ ಅಭಾವ ಕುರಿತು ವಿಚಾರಣೆ ನಡೆಸಿದ್ದ ದಿಲ್ಲಿ ಹೈಕೋರ್ಟ್‌, “ಸರಕಾರಗಳಿಗೆ ಜನರ ಪ್ರಾಣದ ಬಗ್ಗೆ ಚಿಂತೆಯೇ ಇಲ್ಲ ಎಂಬಂತೆ ಭಾಸವಾಗುತ್ತಿದೆ. ಕಾಡಿ-ಬೇಡಿ-ಕದ್ದಾದರೂ ಸರಿ… ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆಯಾಗುವಂತೆ ನೋಡಿಕೊಳ್ಳಿ…’ ಎಂದು ಆದೇಶಿಸಿತ್ತು.

ಆಕ್ಸಿಜನ್‌ ಸಾಗಣೆಗೆ ಅಡ್ಡಿ ಬೇಡ :

Advertisement

ಹೊಸದಿಲ್ಲಿ: ದೇಶಾದ್ಯಂತ ಅಂತಾರಾಜ್ಯ ಮೆಡಿಕಲ್‌ ಆಕ್ಸಿಜನ್‌ ಪೂರೈಕೆಗೆ ವ್ಯತ್ಯಯ ಉಂಟಾಗಬಾರದು. ಒಂದು ವೇಳೆ, ಅಂಥ ಘಟನೆ ನಡೆದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್‌ಪಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಎಲ್ಲÉ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನಿರಂತರವಾಗಿ ಮೆಡಿಕಲ್‌ ಆಕ್ಸಿಜನ್‌ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಪತ್ತು ನಿರ್ವಹಣ ಕಾಯ್ದೆ ಜಾರಿಗೆ ಸೂಚಿಸಿದ್ದಾರೆ. ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಕ್ಸಿಜನ್‌ ಸಾಗಣೆ ವಾಹನಗಳನ್ನು ತಡೆಯು ವುದು, ಮುಟ್ಟುಗೋಲು ಹಾಕಿಕೊಳ್ಳುವುದು ಸಲ್ಲದು ಎಂದು ಹೇಳಿದ್ದಾರೆ.

ಆಕ್ಸಿಜನ್‌ ಪೂರೈಕೆ ಪರಿಶೀಲಿಸಿದ ಪ್ರಧಾನಿ :

ಹೊಸದಿಲ್ಲಿ: ದೇಶದಲ್ಲಿ ಮೆಡಿಕಲ್‌ ಆಕ್ಸಿಜನ್‌ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ನಿಯಮಿತವಾಗಿ ಆಕ್ಸಿಜನ್‌ ಪೂರೈಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಕ್ಸಿಜನ್‌ ಕೊರತೆಯಿಂದ ಸೋಂಕಿತರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ರಾಜ್ಯಗಳ ನಡುವೆ ಶೀಘ್ರವಾಗಿ ಆಕ್ಸಿಜನ್‌ ಸಾಗಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಅದರ ಉತ್ಪಾದನೆ ಮಾಡುವುದರ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸಲಹೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next