Advertisement

ಕನ್ನಡ ಶಾಲೆ-ಮಹದಾಯಿಗೆ ಹಕ್ಕೊತ್ತಾಯ

08:59 AM Jul 30, 2019 | Suhan S |

ಹುಬ್ಬಳ್ಳಿ: ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆಯುವ ಸರಕಾರದ ನಿರ್ಧಾರ ಮರುಪರಿಶೀಲನೆಯಾಗಬೇಕು ಹಾಗೂ ಮಲಪ್ರಭಾ ನದಿಗೆ ಮಹದಾಯಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಎರಡು ದಿನ ಕಾಲ ನಡೆದ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಯಾವುದೇ ಮೂಲಸೌಲಭ್ಯಗಳಿಲ್ಲದೇ ಅಗತ್ಯ ಪರಿಣಿತರಿಲ್ಲದೇ ಕನ್ನಡ ಮಾಧ್ಯಮದ ಶಾಲೆಗಳೆಂದು ಪರವಾನಗಿ ಪಡೆದು ಸರಕಾರಕ್ಕೆ ಮತ್ತು ಸರಕಾರದ ನಿಯಮಾವಳಿಗಳಿಗೆ ನಾಮ ಹಾಕಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿ ಜನತೆಯನ್ನು ಲೂಟಿ ಮಾಡುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಸರಕಾರ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ. ಇದರಿಂದಾಗಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವ ದುಸ್ಥಿತಿ ನಿರ್ಮಾಣವಾಗಿದೆ.

ಮಾತೃ ಭಾಷೆಯಲ್ಲಿ ಆಗ ತಾನೆ ಬೆರಗಿನಿಂದ ಹೊರ ಜಗತ್ತನ್ನು ನೋಡುವ, ಯೋಚಿಸುವ ಎಳೆಯ ಮಗುವಿನ ಮೇಲೆ ತನ್ನದಲ್ಲದ ತನ್ನ ಪರಿಸರದಲ್ಲಿಲ್ಲದ ಅನ್ಯ ಭಾಷೆಯಲ್ಲಿ ವಿಷಯವನ್ನು ಗ್ರಹಿಸುವಂತೆ ಒತ್ತಡ ಹೇರುವುದು, ಆ ಮಗುವಿನ ಮಾನಸಿಕ ಪರಿಸರದ ವಿಕಾಸದ ಮೇಲೆ ಅಹಿತಕರ ಪರಿಣಾಮ ಬೀರುತ್ತದೆಂಬುದು ಜಗತ್ತಿನ ಹಲವು ಅಧ್ಯಯನಗಳು ಹೇಳುತ್ತಿರುವಾಗ ಸರಕಾರದ ಈ ನಡೆ ಸಾಧುವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರವನ್ನು ಮರು ಪರಿಶೀಲಿಸಿ ತನ್ನ ತೀರ್ಮಾನದಿಂದ ಹೊರಬಂದು ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಬೇಕು.

ಮಹದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ರಾಜ್ಯ ಸರಕಾರ ಅಪೂರ್ಣಗೊಂಡ ಕಳಸಾ ಕಾಮಗಾರಿಯನ್ನು ಪೂರ್ಣಗೊಳಿಸಿ ಮಲಪ್ರಭೆಗೆ ಮಹದಾಯಿ ನೀರನ್ನು ಹರಿಸಲು ಕ್ರಮ ವಹಿಸಬೇಕು. ಮಹದಾಯಿ ನದಿ ಪಾತ್ರದ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಕರ್ನಾಟಕದ ನೀರಿನ ಹಕ್ಕು ಪಡೆಯಲು ರಾಜ್ಯ ಸರಕಾರ ವಿಶೇಷ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಲಾಯಿತು.

ಪ್ರೊ| ಕೆ.ಎಸ್‌. ಕೌಜಲಗಿ ನಿರ್ಣಯಗಳನ್ನು ಮಂಡಿಸಿದರು. ಪಾಲ್ಗೊಂಡ ಕನ್ನಡಾಭಿಮಾನಿಗಳು ಒಮ್ಮತದಿಂದ ಬೆಂಬಲ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next