ಬಂಗಾರಪೇಟೆ: ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡಿದರೆ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್ ಹೇಳಿದರು.
ತಾಲೂಕಿನ ಕಾಮಸಮುದ್ರ ಸರ್ಕಾರಿ ಪ್ರೌಢಶಾಲೆಯ 150 ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲಿ ಎಂದು ವಾರ್ಷಿಕವಾಗಿ ಉಚಿತ ಉದಯವಾಣಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉದಯವಾಣಿಯಲ್ಲಿ ಶಿಕ್ಷಣ ಮಾರ್ಗದರ್ಶನ ಪ್ರಕಟಣೆಯಾಗುತ್ತಿರುವುದರಿಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಮಸಮುದ್ರ ಹೋಬಳಿ ಗಡಿಭಾಗದಲ್ಲಿರುವುದರಿಂದ ಮಕ್ಕಳಿಗೆ ಇಂದಿನ ತಾಂತ್ರಿಕ ಯುಗದ ಬಗ್ಗೆ ಅರಿವು ಕಡಿಮೆ ಇದೆ. ಪಟ್ಟಣ ಪ್ರದೇಶದಂತೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲೆಂದು ಉದಯವಾಣಿ ಪತ್ರಿಕೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಕಾಮಸಮುದ್ರ ಗ್ರಾಪಂ ಅಧ್ಯಕ್ಷ ಆದಿನಾರಾಯಣ ಕುಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಶಿಕ್ಷಕರೂ ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಶಿಕ್ಷಕರ ಈ ಪ್ರಯತ್ನಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಅಹ ಬಡ ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸ್ಪಂದಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ತಾಲೂಕಿನ ಗಡಿಭಾಗದಲ್ಲಿರುವ ಕಾಮಸಮುದ್ರ ಹೋಬಳಿಯ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪ್ರತಿ ದಿನ ದಿನಪತ್ರಿಕೆ ಕೊಂಡು ಓದಲು ಅಶಕ್ತರಾಗಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸೇವೆ ಮಾಡುತ್ತಿರುವುದು ನಿಜಕ್ಕೂ ಸಾರ್ಥಕವಾದ ಸೇವೆಯಾಗಿದೆ ಎಂದು ಹೇಳಿದರು.
ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಉಪಪ್ರಾಂಶುಪಾಲ ಎನ್.ಕೃಷ್ಣಾರೆಡ್ಡಿ, ಶಿಕ್ಷಕರಾದ ವಿ.ಸಾಯಿದಿವ್ಯಾ, ಜೆ.ಕವಿತಾ, ಜಿ.ಎಸ್.ಚಂದ್ರಿಕಾ, ಶೋಭಾ ಎಸ್.ಬಡಿಗೇರ್, ಖಲಿದಾ ಆಸ್ಮಾಖಾನಂ, ಕೆ.ಎಸ್.ರವಿಕುಮಾರ್, ಎಸ್.ಸುಜಾತಾ, ಎನ್‌ವಿ.ನಾಗರಾಜಾಚಾರಿ, ಸುರೇಶ್ ಡಿ.ಕರಿಭೀಮಣ್ಣನವರ್, ಎಂ.ಎನ್.ಗಿರೀಶ್ ಇದ್ದರು.