ಬಂಗಾರಪೇಟೆ: ಸಂಸದರ ನಿಧಿಯಿಂದ ಕುಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಮೀಕ್ಷೆ ನಡೆಸಲಾಗುತ್ತಿದ್ದು, ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಮುನಿರಾಜು ಮನವಿ ಮಾಡಿದರು.
2019-20ನೇ ಸಾಲಿಗೆ ಪ್ರಧಾನ ಮಂತ್ರಿ ಆದರ್ಶಗ್ರಾಮವಾಗಿ ತಾಲೂಕಿನ ಕೀಲುಕೊಪ್ಪವನ್ನು ಆಯ್ಕೆ ಮಾಡಿದ್ದರ ಹಿನ್ನೆಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಕೈಗೊಳ್ಳಲಾದ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮೀಕ್ಷೆ ಉದ್ದೇಶವನ್ನು ಗ್ರಾಮಸ್ಥರಿಗೆ ತಿಳಿಸಿದರು.
ಸಮೀಕ್ಷೆಯಲ್ಲಿ ಶೌಚಾಲಯ, ವಸತಿ, ಕುಡಿಯುವ ನೀರು, ಚರಂಡಿ, ರಸ್ತೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕಟ್ಟಡ, ಸರ್ಕಾರಿ ಶಾಲಾ ಕಟ್ಟಡ ಸೇರಿ ಮನುಷ್ಯನ ಜೀವನಕ್ಕೆ ಬೇಕಾದಂತಹ ಕನಿಷ್ಠ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದರು.
ಸಾಮಾಜಿಕ ಭದ್ರತೆ ಯೋಜನೆಗಳಾದ ವೃದಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಮನಸ್ವಿನಿ ವೇತನ, ಸಂಧ್ಯಾ ಸುರಕ್ಷಾ, ಪಡಿತರ ವಿತರಣೆ, ಅಂಗನವಾಡಿ ಕೇಂದ್ರದಲ್ಲಿ ಆಹಾರ ವಿತರಣೆ, ಶುದ ಕುಡಿಯುವ ನೀರು ಪೂರೈಕೆ, ಬಿಸಿಯೂಟ ಯೋಜನೆ, ಅಂಗನವಾಡಿ, ಶಾಲಾ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆ ವೇಳೆ ಮೇಲ್ವಿಚಾರಕಿ ಹಾಗೂ ನಿಲಯ ಪಾಲಕಿ ಜಿ.ಅಂಜಲಿದೇವಿ, ಸಿಬ್ಬಂದಿ ರಂಗಲಕ್ಷ್ಮೀ, ನಿರ್ಮಲಾ, ದಿವ್ಯಾ, ಪವಿತ್ರಾ ಮುಂತಾದವರು ಇದ್ದರು.