Advertisement

ಪರಿಷತ್‌ ಚುನಾವಣಾ ಯಶಸ್ಸಿಗೆ ಸಹಕರಿಸಿ: ಸುಂದರೇಶ ಬಾಬು

02:03 PM May 17, 2022 | Team Udayavani |

ಗದಗ: ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೇ 12ರಿಂದ ಜೂ. 17ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಚುನಾವಣೆಯು ಶಾಂತಿಯುತ ಹಾಗೂ ನಿಷ್ಪಕ್ಷಪಾತವಾಗಿ ಜರುಗಿಸಲು ರಾಜಕೀಯ ಪಕ್ಷಗಳು ಅಗತ್ಯ ಸಹಕಾರ ನೀಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಕಾಧಿರಿ ಎಂ.ಸುಂದರೇಶ್‌ ಬಾಬು ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜೂ. 13 ರಂದು ಮತದಾನ ಜರುಗಲಿದ್ದು, 16 ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲೆಯಲ್ಲಿ 14 ಮುಖ್ಯ ಮತಗಟ್ಟೆಗಳು ಹಾಗೂ 1 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 15 ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಜ. 17ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ 2210 ಪುರುಷರು, 1016 ಮಹಿಳೆಯರು ಸೇರಿದಂತೆ ಒಟ್ಟು 3226 ಮತದಾರರಿದ್ದಾರೆ. ನಿರಂತರ ಪರಿಷ್ಕರಣೆಯಡಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನ ಮುಂಚಿತವಾಗಿ ಸ್ವೀಕೃತವಾದ ಅರ್ಜಿಗಳನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಾಲೂಕುವಾರು ಮೂರರಂತೆ ಒಟ್ಟು 21 ಸಂಚಾರಿ ದಳ ತಂಡಗಳನ್ನು, ಏಳು ವಿಡಿಯೋ ಸರ್ವೆಲನ್ಸ್‌ ತಂಡಗಳನ್ನು ಹಾಗೂ 14 ವಿಡಿಯೋ ವ್ಯೂವಿಂಗ್‌ ತಂಡಗಳನ್ನು ರಚಿಸಲಾಗಿದೆ. ಏಳು ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ. ಜಿಪಂ ಸಿಇಒ ಡಾ| ಸುಶೀಲಾ. ಬಿ ಅವರನ್ನು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್‌ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ ಎಂದರು.

ಪ್ರಭಾರಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಮಾತನಾಡಿ, ಚುನಾವಣೆ ಕುರಿತಂತೆ ಜಿಲ್ಲೆಯಲ್ಲಿ ಯಾವುದೇ ದೂರುಗಳು ಸ್ವೀಕೃತವಾದಲ್ಲಿ ಅವುಗಳ ನಿರ್ವಹಣೆಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಬೂಬ ತಾಂಬ್ರಮಟ್ಟಿ ಅವರನ್ನು ಜಿಲ್ಲಾ ಸಂಪರ್ಕಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ ಮೊದಲಾದವರು ಪಾಲ್ಗೊಂಡಿದ್ದರು. ಚುನಾವಣಾ ಶಾಖೆ ತಹಶೀಲ್ದಾರ್‌ ಪರಸಪ್ಪ ಕಳಾಲ, ಶಿರಸ್ತೇದಾರ ಸಾಲಿಮಠ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next