ಮಸ್ಕಿ: ಕಳೆದ ಹಲವು ವರ್ಷಗಳಿಂದ ಗ್ರಾಪಂನಲ್ಲಿ ಹಲವು ಸಮಸ್ಯೆಗಳಿವೆ. ಲಂಚ-ಆರೋಪಗಳ ಬಗ್ಗೆ ದೂರು ಕೇಳಿಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಸಮಸ್ಯೆ ಮುಕ್ತ ಗ್ರಾಪಂ ನಿರ್ಮಾಣ ಮಾಡೋಣ ಎಂದು ದೇವದುರ್ಗ ಶಾಸಕ ಎನ್. ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ರವಿವಾರ ನಡೆದ ಚುನಾಯಿತ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸಿಎಂ ರಾಜ್ಯದಲ್ಲಿ 5 ಲಕ್ಷ ಆಶ್ರಯ ಮನೆ ನೀಡುತ್ತಾರೆ. ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ ಶಾಶ್ವತವಾಗಿ ಉಳಿಯುವ ಯೋಜನೆ ಮಾಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಸಮಾಜ ಸೇವೆಗಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಸಭ್ಯ ಅಭ್ಯರ್ಥಿ. ಹೀಗಾಗಿ ಅವರನ್ನು ಆಯ್ಕೆ ಮಾಡಿ ಗ್ರಾಪಂಗಳು ಅಭಿವೃದ್ಧಿಯಾಗುತ್ತೆ ಎಂದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಮಾತನಾಡಿದರು. ಈ ವೇಳೆ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ತಿಪ್ಪರಾಜ್ ಹವಾಲ್ದಾರ್, ಅಮರೇಗೌಡ ವಿರುಪಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಾನಂದ ಯಾದವ್, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಳ್ಳಿ, ಅಪ್ಪಾಜಿಗೌಡ, ಮಹದೇವಪ್ಪ ಗೌಡ, ಮಲ್ಲಪ್ಪ ಅಂಕುಶದೊಡ್ಡಿ, ವಿಶ್ವನಾಥ ಪಾಟೀಲ್ ಸೇರಿದಂತೆ ಇತರರಿದ್ದರು.