Advertisement

ಪ್ರಥಮ ಬಾರಿ 4 ಬೆಳೆಗೆ ಬೆಂಬಲ ಬೆಲೆ;APMC ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲ

02:47 PM Sep 06, 2024 | Team Udayavani |

ಬೆಂಗಳೂರು: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ವಿಧಾನಸೌಧದಲ್ಲಿ ಸೆ.6ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಗುರುವಾರ (5.9.2024)  ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಿದೆ ಎಂದರು.

ಎಫ್ ಎ ಕ್ಯೂ ಗುಣಮಟ್ಟದ ಸೋಯಾಬಿನ್ಗೆ ಕ್ವಿಂಟಲ್ ಗೆ 4,892 ರೂ ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್ ಗೆ 7,400 ರೂ. ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು ಎಂದು ಹೇಳಿದರು.

20234-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು ಎಂದು ತಿಳಿಸಿದರು.

Advertisement

ಎಫ್ಎಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ನಿಗದಿಪಡಿಸಲಾಗಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ .ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಯಾರ್ಡ್ ಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 14ರಿಂದ 15 ಶೀಥಲ ಗೃಹಗಳನ್ನು ಎಪಿಎಂಸಿಗಳಲ್ಲಿ ನಿರ್ಮಾಣ ಮಾಡಲಾಗುವುದು. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿಭಾಗಾವಾರು ವಿಜಿಲೆನ್ಸ್ ಸೆಲ್ಗಳನ್ನು ರಚಿಸಲಾಗಿದೆ ಎಂದರು.

ವಿಜಿಲೆನ್ಸ್ ರಚನೆ ಪರಿಣಾಮ ಎಪಿಎಂಸಿ ಆದಾಯ ಕೂಡ ಹೆಚ್ಚಾಗಿದೆ, ಈ ವರ್ಷ 380ರಿಂದ 400 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಆರ್ಥಿಕ ವರ್ಷದ 5 ತಿಂಗಳಲ್ಲಿ 133.15 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ  ವರ್ಷ ಇದೇ ಅವಧಿಯಲ್ಲಿ 77.42 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next