ಚಾಮರಾಜನಗರ: ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಗಳು ಬಾಲ ಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕ ವಾಗಿರುವ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಒಡಿಪಿ ಸಂಸ್ಥೆ ಹಾಗೂ ಸಾಧನಾ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣಾ ಕಾಯ್ದೆ 1986ರ ತಿದ್ದುಪಡಿ 2016ರ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡಿ: ಸಂವಿಧಾನದಲ್ಲಿ ಅನುಚ್ಛೇದ 21ಎ, 24 ಮತ್ತು 32ರಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಆರೋಗ್ಯ, ಮಕ್ಕಳ ಸಂರಕ್ಷಣೆಯನ್ನು ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಪೋಷಕರು ಮಕ್ಕಳನ್ನು ಕೆಲಸಕ್ಕೆ ದೂಡದೆ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡುವುದರ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಬಾಲ ಕಾರ್ಮಿಕ ಪದ್ಧತಿಗೆ ಇತಿಶ್ರೀ ಹಾಡಬೇಕಿದೆ ಎಂದು ಹೇಳಿದರು.
ಕಾನೂನು ಮೀರಿದರೆ ಶಿಕ್ಷೆ: ತಿದ್ದುಪಡಿ ಕಾಯ್ದೆ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಕಸಕ್ಕೆ ನೇಮಕ ಮಾಡಿಕೊಳ್ಳುವಂತಿಲ್ಲ. ಈ ಕಾಯ್ದೆ ಪ್ರಕಾರ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ. 18 ವರ್ಷದೊಳಗಿನ ಕಿಶೋರಾವಸ್ಥೆ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ಕಾಯ್ದೆಗೆ ವಿರುದ್ಧವಾಗಿ ಕೆಲಸಕ್ಕೆ ಬಳಸಿಕೊಂಡರೆ, ಅಂತಹ ಮಾಲಿಕರ ವಿರುದ್ಧ ಮೊಕದ್ದಮೆ ಹೂಡಬಹುದು. ಕನಿಷ್ಠ 25 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ಮತ್ತು ಆರು ತಿಂಗಳಿಂದ 2 ವರ್ಷದವರೆಗೆ ಶಿಕ್ಷೆ ನೀಡಬೇಕೆಂದು ಕಾಯ್ದೆಯಲ್ಲಿ ನಿಕರವಾಗಿ ತಿಳಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳನ್ನು ಶಾಲೆಗೆ ಕಳುಹಿಸಿ: ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಎಂ.ಮಹೇಶ್ ಮಾತನಾಡಿ, ದುಡಿಯುವ ಮಕ್ಕಳು ಎಲ್ಲಾದರು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ತಿಳಿಸಬೇಕು. ಬಾಲ ಕಾರ್ಮಿಕರ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳಿಸಲು ನಾವೇಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.
ಮಕ್ಕಳನ್ನು ರಕ್ಷಣೆ ಮಾಡಿ: ಬಾಲ ನ್ಯಾಯ ಮಂಡಲಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ಬಾಲ್ಯದ ಶಿಕ್ಷಣ ನೀಡುವುದು ಸರ್ಕಾರದ, ಸಮಾಜದ ಹಾಗೂ ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ವಲಯ ಮೇಲ್ವಿಚಾರಕಿ ರಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.
ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿರುವುದು ವಿಷಾದನೀಯ ಸಂಗತಿ. ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಜೊತೆಗೆ ಪೋಷಕರು ಮಕ್ಕಳ ಮೇಲಿನ ಸಂಪೂರ್ಣ ಜವಾಬ್ದಾರಿ ಹೊರಬೇಕಾಗಿದೆ.
-ಡಿ.ಎಸ್.ಪ್ರೇಮ್‌ಕುಮಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ