ಮಂಗಳೂರು: ಕಾಂಗ್ರೆಸ್ ಪಕ್ಷ ಜಿಲ್ಲೆಯ ಶಾಂತಿ ಸಹಬಾಳ್ವೆಗೆ ಸಹೋದರ ಭಾವದಿಂದ ಬದುಕುವ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿದ್ದು, ಮಿಥುನ್ ರೈ ಒಬ್ಬ ಉತ್ತಮ ಅಭ್ಯರ್ಥಿ. ಜಿಲ್ಲೆಗೆ ಸುಶಿಕ್ಷಿತ, ಪದವೀಧರ ಅಭ್ಯರ್ಥಿಯನ್ನು ಈ ಬಾರಿ ಕಾಂಗ್ರೆಸ್ ನೀಡಿದ್ದು, ಲೋಕಸಭೆಯಲ್ಲಿ ಮುಂದುವರಿದ ಜಿಲ್ಲೆಯ ಜನರ ಧ್ವನಿ ಆಗಲು ಮಿಥುನ್ ರೈ ಅರ್ಹರು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
“ಬಿಜೆಪಿಯ ಸಂಸದರ ಅವಧಿಯಲ್ಲಿ ಅಭಿವೃದ್ಧಿಗೆ ಸಂಪೂರ್ಣ ಹಿನ್ನಡೆಯಾ
ಗಿದೆ. ಚುನಾವಣೆಯಲ್ಲಿ ಮಿಥುನ್ ರೈ ಗೆಲುವನ್ನು ಪಡೆಯುತ್ತಾರೆ ಎಂದು ನನಗೆ
ದೇವರ ಪ್ರೇರಣೆ ಆಗಿದೆ. ನಾವೆಲ್ಲರೂ ಸೇರಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಹಾಗೂ ನೆಮ್ಮದಿಯ ನಾಳೆಗಳಿಗಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು’ ಎಂದರು.
“ನನ್ನ ರಾಜಕೀಯ ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ನಿಷ್ಕಳಂಕವಾಗಿ ಕಾರ್ಯನಿರ್ವಹಿಸಿ ಕೇಂದ್ರ ಸರಕಾರದ ಮಂತ್ರಿಯಾಗಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡನಾಗಿ ದೇಶದ ಸೇವೆ ಮಾಡುವ ಸೌಭಾಗ್ಯವನ್ನು ನನಗೆ ಕಾಂಗ್ರೆಸ್ ಪಕ್ಷ ನೀಡಿತ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ. ನಾನು ಸೋತ ಸಂದರ್ಭದಲ್ಲಿಯೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪದೇಪದೇ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನನಗೆ ನೀಡಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಶಿಕ್ಷಣ ಉದ್ಯೋಗ ಮತ್ತು ರಾಜಕೀಯದಲ್ಲಿ ಅವಕಾಶಗಳನ್ನು ಪಡೆದು ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಈ ಎಲ್ಲ ಕೆಲಸಗಳಿಗೆ ಪೂರಕವಾಗಿ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ ಸಂತೃಪ್ತಿ ನನಗೆ ಇದೆ. ಕಾಂಗ್ರೆಸ್ ಸಂಸದರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ವಿಮಾನ ನಿಲ್ದಾಣ, ನವಮಂಗಳೂರು ಬಂದರು ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಅಭಿವೃದ್ಧಿ, ಎನ್‌ಐಟಿಕೆ, ಎಂಸಿಎಫ್, ಎಂಆರ್‌ಪಿಎಲ್, ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಇತ್ಯಾದಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಮಾಡಲಾಗಿತ್ತು. ಆದ್ದರಿಂದ, ಪ್ರಜ್ಞಾವಂತ ಮತದಾರರು ಮತದಾನದಲ್ಲಿ ಭಾಗವಹಿಸಿ ಮಿಥುನ್ ರೈ ಅವರನ್ನು ಬೆಂಬಲಿಸಬೇಕಿದೆ’ ಎಂದು ಅವರು ಮನವಿ ಮಾಡಿದ್ದಾರೆ.