ಶ್ರೀರಂಗಪಟ್ಟಣ: ಮುಂದಿನ 2025ರ ಅಂತ್ಯಕ್ಕೆ ಕುಷ್ಠರೋಗ ಮುಕ್ತ ರಾಜ್ಯವನ್ನಾಗಿ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಡಾ.ಸುರೇಶ್ ಮನವಿ ಮಾಡಿದರು.
ತಾಲೂಕಿನ ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ನಡೆದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಕುಷ್ಠರೋಗ ಒಂದು ಅಂಟು ರೋಗ, ಇದು ಮೈಕ್ರೋಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಹರಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಕುಷ್ಠ ರೋಗದಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಸ್ವಚ್ಛತೆ ಕಾಪಾಡಿ: ಕುಷ್ಠರೋಗಿಗಳು ಮಾತನಾಡುವ ವೇಳೆ ಕೆಮ್ಮು, ಸೀನು ಹೊರ ಹಾಕಿದರೆ,ಅದರಲ್ಲಿರುವ ರೋಗಾಣು ಆರೋಗ್ಯವಂತಎದುರಿಗಿರುವ ವ್ಯಕ್ತಿಯ ಮೇಲೂ ದಾಳಿ ಮಾಡಿದರೆ, ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಕುಷ್ಠರೋಗಿಗಳೂ ವೈಯಕ್ತಿಕ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಇತರರೊಂದಿಗೆ ಮಾತನಾಡುವವ ವೇಳೆ ಜಾಗ್ರತೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಚ್ಚೆಗಳು ಮುಚ್ಚಿಡಬೇಡಿ: ಹಿರಿಯ ಆರೋಗ್ಯ ಮೇಲ್ವಿಚಾರಕ ಜಿ.ಬಿ.ಹೇಮಣ್ಣ ಮಾತನಾಡಿ, ಮಚ್ಚೆ ಮುಚ್ಚಿಡಬೇಡಿ, ಮುಚ್ಚಿಟ್ಟರೆ ಮುಂದೊಂದು ದಿನ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಅನುಮಾನಸ್ಪದ ತಿಳಿ-ಬಿಳಿ ತಾಮ್ರ ಬಣ್ಣದ, ಸ್ಪರ್ಶ ಜ್ಞಾನವಿಲ್ಲದೆ, ಸಾಮಾನ್ಯ ಚರ್ಮಕ್ಕಿಂತ ದಪ್ಪವಾದ, ತುಂಬಾ ನುಣುಪಾದ, ಹೊಳಪು ಹೊಂದಿರುವ, ಕೂದಲು ಬೆಳೆಯದಿರುವ ಮಚ್ಚೆ ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಹಲೆ ಮತ್ತು ಮಾರ್ಗದರ್ಶನ ಪಡೆದು ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಬಳಿಕ 350ಕ್ಕೂ ಹೆಚ್ಚು ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಿಗೆ ಕುಷ್ಠರೋಗ ಕುರಿತು ಜಾಗೃತಿ ಮೂಡಿಸಿದರು. ಜಾಥಾದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸರಸ್ಪತಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ದೇಶಪಾಂಡೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನೀಲಾವತಿ, ಸುಮತಿ, ರೇವತಿ, ರಮ್ಯ, ಸ್ಪಪ್ನ ಆರ್. ನಾಯರ್, ಫರಿಜ್ ಅಹಮದ್, ರೂಪಾ, ಶಾಲಾ ಹಾಗೂ ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.