Advertisement

ತೆನೆ ಬೆಂಬಲದಲ್ಲೂ ಕೈನಲ್ಲಿ ಗುಂಪು

02:05 PM May 10, 2019 | Suhan S |
ಬನಹಟ್ಟಿ/ಮಹಾಲಿಂಗಪುರ: ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲೇ ಈ ಬಾರಿ ಅತಿ ಹೆಚ್ಚು ಮತದಾನವಾದ ದಾಖಲೆ ತೇರದಾಳ ಕ್ಷೇತ್ರಕ್ಕಿದೆ. ಇದು ಬಿಜೆಪಿಗೆ ಲಾಭ ಕೊಡಲಿದೆ ಎಂಬ ನಿರೀಕ್ಷೆಯಲ್ಲಿ ಕಮಲ ನಾಯಕರಿದ್ದರೆ, ಬಿಜೆಪಿಯ ಕೆಲವರು, ಅವರದೇ ಪಕ್ಷಕ್ಕೆ ಒಳ ಹೊಡೆತ ನೀಡಿದ್ದು, ಜೆಡಿಎಸ್‌ನ ಮೈತ್ರಿಯೊಂದಿಗೆ ಒಳ ಹೊಡೆತದ ಲಾಭ ಸಿಗಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಲೆಕ್ಕಾಚಾರ ಹಾಕುತ್ತಿದೆ.

ಹೌದು, ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಶೇ.74.90ರಷ್ಟು ಮತದಾನ (ಕಳೆದ ಬಾರಿ ಶೇ.74.41)ವಾಗಿದೆ. ಕಳೆದ ಬಾರಿಗಿಂತ ಈ ಸಲ 17,272 ಜನ ಮತದಾರರು ಹೆಚ್ಚಳವಾಗಿದ್ದು, ಮತದಾನ ಪ್ರಮಾಣದಲ್ಲಿ ಶೇ.049ನಷ್ಟು ಕಳೆದ ಲೋಕಾ ಚುನಾವಣೆಗಿಂತ ಹೆಚ್ಚಾಗಿದೆ. ಮತದಾನ ಪ್ರಮಾಣ ಹೆಚ್ಚಾದಷ್ಟು ಬಿಜೆಪಿಗೇ ಲಾಭ ಎಂಬುದು ಆ ಪಕ್ಷದ ಈಚಿನ ನಂಬಿಕೆಗಳು ಹಲವು ಬಾರಿ ನಿಜಗೊಳಿಸಿವೆ. ಹೀಗಾಗಿ ಈ ಬಾರಿಯೂ ಅದೇ ನಂಬಿಕೆಯಲ್ಲಿ ಬಿಜೆಪಿ ಇದೆ.

Advertisement

ಕಳೆದ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿಯ ಗೆಲುವಿಗೆ ಈ ಕ್ಷೇತ್ರ ದೊಡ್ಡ ಕೊಡುಗೆ ನೀಡಿತ್ತು. 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲೇ ಅತಿ ಹೆಚ್ಚು 34,859 ಮತಗಳ ಅಂತರ ಬಿಜೆಪಿಗೆ ಇಲ್ಲಿ ದೊರೆತಿತ್ತು. ಒಂದು ವರ್ಷದ ಹಿಂದಷ್ಟೇ ನಡೆದಿದ್ದ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, 2,599 ಮತಗಳ ಅಂತರ ಪಡೆದಿದ್ದರೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 20,888 ಮತಗಳ ಹಿನ್ನಡೆ ಸಾಧಿಸಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿ- ಕೆಜೆಪಿ ಗೊಂದಲದಲ್ಲಿ ಹಿನ್ನಡೆ ಅನುಭವಿಸಿದ್ದೇವು. ಈಗ ಪಕ್ಷದಲ್ಲಿ ಸಂಘಟನೆಯ ಬಲವಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಮೋದಿ ಅಲೆ, ಅಭ್ಯರ್ಥಿ ಗದ್ದಿಗೌಡರ ಪ್ರಭಾವ (ಗದ್ದಿಗೌಡರು ಈ ಕ್ಷೇತ್ರದ ಧಾರ್ಮಿಕ, ಸಾಂಸ್ಕೃತಿಕ ಸಹಿತ ಪ್ರತಿ ಕಾರ್ಯಕ್ಕೂ ಹಾಜರಾಗುತ್ತಾರೆ)ವಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ 3ರಿಂದ 4 ಗುಂಪುಗಾರಿಕೆ ಇವೆ. ಇದು ಬಿಜೆಪಿಗೆ ಮತಗಳಾಗಿ ಲಾಭವಾಗಿದೆ ಎಂಬುದು ಪಕ್ಷದ ನಿರೀಕ್ಷೆ.

ಬಿಜೆಪಿ ಒಳ ಹೊಡೆತ ಲಾಭದ ವಿಶ್ವಾಸ: ಕ್ಷೇತ್ರ ವ್ಯಾಪ್ತಿಯ ಮಹಾಲಿಂಗಪುರ, ತೇರದಾಳ, ರಬಕವಿ-ಬನಹಟ್ಟಿ ಹಾಗೂ ಗ್ರಾಮೀಣ ಭಾಗದ ಮತಗಟ್ಟೆವಾರು ಮತದಾನದ ವಿವರೊಂದಿಗೆ ಲೆಕ್ಕ ಹಾಕುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ ಬಲದೊಂದಿಗೆ ಬಿಜೆಪಿಯ ಕೆಲ ಪ್ರಮುಖರ ಒಳ ಹೊಡೆತದ ಲಾಭ ನಮಗೆ ಆಗಿದೆ ಎನ್ನುತ್ತಿದೆ.

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಇಲ್ಲಿ 12,433 ಮತ ಪಡೆದಿತ್ತು. ಆ ಮತಗಳು ಮೈತ್ರಿ ಕಾರಣದಿಂದ ನಮಗೆ ಬರುತ್ತವೆ. ಅಲ್ಲದೇ ಬಹುಕಾಲದ ಬೇಡಿಕೆಯಾಗಿದ್ದ ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದರ ಲಾಭವೂ ನಮಗೆ ತಟ್ಟಿದೆ. ತೇರದಾಳ ಪಟ್ಟಣದಲ್ಲಿ ಅತಿ ಕಡಿಮೆಯಾಗುತ್ತಿದ್ದ ಮತದಾನ ಈ ಬಾರಿ ಹೆಚ್ಚಾಗಿರುವುದೂ (ತಾಲೂಕಿಗಾಗಿ ಇಡೀ ಪಟ್ಟಣ ಎರಡು ಬಾರಿ ಚುನಾವಣೆ ಬಹಿಷ್ಕರಿಸಿತ್ತು) ಅದೇ ಕಾರಣಕ್ಕೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್‌ ಇದೆ.

ಮೈತ್ರಿ ಪಕ್ಷಗಳಿಂದ ಹೆಚ್ಚು ಕೇಂದ್ರೀಕೃತ: ಕಳೆದ ಲೋಕಸಭೆ ಚುನಾವಣೆಯಲ್ಲಿ 34,859 ಮತಗಳ ಭಾರಿ ಹಿನ್ನಡೆ ಅನುಭವಿಸಿದ್ದರಿಂದ ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸಹಿತ, ಎರಡೂ ಪಕ್ಷಗಳ ನಾಯಕರು ತೇರದಾಳ ಕ್ಷೇತ್ರದ ಮೇಲೆ ಹೆಚ್ಚು ಕೇಂದ್ರೀಕೃತಗೊಂಡು ಪ್ರಚಾರ ನಡೆಸಿದ್ದರು. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ, ತೇರದಾಳ ಪಟ್ಟಣಕ್ಕೆ ಬಂದು, ನಿಮ್ಮ ಹಲವು ವರ್ಷದ ಬೇಡಿಕೆ ಈಡೇರಿಸಿದ್ದೇನೆ, ನನ್ನ ತಂಗಿ (ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ)ಯನ್ನು ಗೆಲ್ಲಿಸಿ. ಅದೇ ನೀವು ನನಗೆ ಕೊಡುವ ಉಡುಗೊರೆ ಎಂದು ಭಾವನಾತ್ಮಕ ಭಾಷಣವೂ ಮಾಡಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ, ಕ್ಷೇತ್ರದಲ್ಲಿರುವ ಅಹಿಂದ ಮತಗಳ ಮೇಲೆ ಕಣ್ಣಿಟ್ಟೇ ಮತಬೇಟೆಯ ಭಾಷಣ ಮಾಡಿದ್ದರು. ಇದೆಲ್ಲದರ ಪರಿಣಾಮ, ನಮಗೆ ಹೆಚ್ಚು ಮತ ಬಂದಿವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ.

Advertisement

ಜೆಡಿಎಸ್‌ಗೂ ನೆಲೆ: ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿರುವ ಪ್ರೊ| ಬಸವರಾಜ ಕೊಣ್ಣೂರ, ಜೆಡಿಎಸ್‌ ಸೇರ್ಪಡೆಯಿಂದ ಈ ಕ್ಷೇತ್ರದಲ್ಲಿ ಪಕ್ಷಕ್ಕೂ ಒಂದಷ್ಟು ನೆಲೆ ಸಿಕ್ಕಿದೆ. ಈ ನೆಲೆಯೇ ಕಾಂಗ್ರೆಸ್‌ ಅಭ್ಯರ್ಥಿಗೆ ಒಂದಷ್ಟು ಬಲ ಕೊಡಲಿದೆ ಎಂಬ ವಿಶ್ಲೇಷಣೆ ಕೂಡ ನಡೆಯುತ್ತಿದೆ. ಆದರೆ, ಸ್ಥಳೀಯವಾಗಿ ಕಾಂಗ್ರೆಸ್‌ನ ಗುಂಪುಗಾರಿಕೆಯಿಂದ ಜೆಡಿಎಸ್‌ನವರಿಗೂ ಈ ಚುನಾವನೆಯಲ್ಲಿ ಒಂದಷ್ಟು ಬೇಸರ ಮೂಡಿಸಿತ್ತು ಎಂಬ ಮಾತು ಕೇಳಿ ಬಂದಿತ್ತು.

ಎರಡು ಪಕ್ಷಗಳ ಹಲವು ಲೆಕ್ಕಾಚಾರಗಳ ನಡುವೆಯೂ, ಟೀಮ್‌ ಮೋದಿ ತಂಡ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಪಟ್ಟಣ, ಹಳ್ಳಿಗಳಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ತಂಡ, ಮತ್ತೂಮ್ಮೆ ಮೋದಿ ಹೆಸರಿನಲ್ಲಿ ಬಿಜೆಪಿ ಬಲ ಕೊಡಿಸುವ ಕೆಲಸ ಗುಪ್ತಗಾಮಿನಿಯಂತೆ ನಡೆದಿತ್ತು. ಜತೆಗೆ ಮೋದಿ ಪ್ರಭಾವ, ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಮತ್ತೋತ್ತರದ ಬಳಿಕ ಸಮಬಲದ ಲೆಕ್ಕಾಚಾರಗಳಿದ್ದರೂ, ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂಬ ಮಾತು ಕ್ಷೇತ್ರದ ಗ್ರಾಮೀಣ ಜನರಿಂದ ಕೇಳಿ ಬಂದಿದೆ.

•ಕಿರಣ ಆಳಗಿ/ ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next