ಮಸ್ಕಿ: ಮಸ್ಕಿ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಪುರಸಭೆ ಸದಸ್ಯರು ಸಂಕಲ್ಪ ಮಾಡಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ದೈವದ ಕಟ್ಟೆ ಹತ್ತಿರ ನಡೆದ 2017-18ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ 1.57 ಕೋಟಿ ಹಾಗೂ 14ನೇ ಹಣಕಾಸು ಅನುದಾನದ 1.45 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡೆಗಡೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳ ಮೇಲೆ ಪುರಸಭೆಯ ಎಲ್ಲ ಸದಸ್ಯರು ನಿಗಾವಹಿಸಿ ಗುಣಮಟ್ಟದ ಕಾಮಗಾರಿ ಮಾಡುವಲ್ಲಿ ಸಹಕರಿಸಬೇಕು. ಪಟ್ಟಣಕ್ಕೆ ಸತತ ಇಪ್ಪತ್ನಾಲ್ಕು ತಾಸು ನೀರು ಸರಬುರಾಜು ಯೋಜನೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತವಾಗಿಸಲು ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕಾಮಗಾರಿಗಳನ್ನು ಯಾರೇ ಮಾಡಲಿ ಮೊದಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮಸ್ಕಿ ಪುರಸಭೆಯನ್ನು ಮಾದರಿಯಾಗಿಸಲು ಸಂಕಲ್ಪ ಮಾಡಲಾಗಿದೆ. ಸರಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗೆ ಅನುದಾನ ತರಲು ಪ್ರಯತ್ನ ಮಾಡಲಾಗುವುದು. ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕೆಂದು ಕೋರಿದರು.
ಜಿಪಂ ಮಾಜಿ ಸದಸ್ಯ ಮಹಾದೇಪ್ಪಗೌಡ ಮಾತನಾಡಿ, ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಮಾಡಿರುವ ಚರಂಡಿಗಳಲ್ಲಿ ನೀರು ಮುಂದಕ್ಕೆ ಹೋಗದೆ ಅಲ್ಲೇ ನಿಂತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೇ ಅದರ ನಿರ್ವಹಣೆ ಮಾಡಲು ಪುರಸಭೆ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ನೀರು ಸರಬರಾಜು ಮಾಡುವಲ್ಲಿ ನಿರ್ಲಕ್ಷಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ವತ್ಛ ಭಾರತ್ ಯೋಜನೆಯಡಿ ಸಾಕಷ್ಟು ಜನ ಶೌಚಾಲಯ ನಿರ್ಮಿಸಿಕೊಂಡಿದ್ದು, ಸಹಾಯಧನ ಶೀಘ್ರ ಬಿಡುಗಡೆ ಮಾಡಬೇಕು ಎಂದರು.
ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಸಪ್ಪ ಬ್ಯಾಳಿ, ದೊಡ್ಡಪ್ಪ ಕಡಬೂರ ಇತರರಿದ್ದರು.