Advertisement

ನದಿ ಉಳಿಸಿ ಅಭಿಯಾನಕ್ಕೆ ಮೈಸೂರಲ್ಲೂ ಬೆಂಬಲ

12:37 PM Sep 02, 2017 | |

ಮೈಸೂರು: ನದಿಗಳ ಉಳಿವಿಗಾಗಿ ನಡೆಸಲಾಗುತ್ತಿರುವ ನದಿ ಉಳಿಸಿ ಅಭಿಯಾನಕ್ಕೆ ನಗರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ನಗರದ ಪ್ರಮುಖ ಕಡೆಗಳಲ್ಲಿ ನದಿ ಉಳಿಸುವಂತೆ ಒತ್ತಾಯಿಸಿ ಭಿತ್ತಿಪತ್ರಗಳನ್ನು ಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಸಿದರು. 

Advertisement

ಭಾರತದ ಜೀವನಾಡಿಗಳಾಗಿರುವ ನದಿಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಸದ್ಗುರು ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಸಲಾಗುತ್ತಿದೆ.ಈ ಹೋರಾಟವನ್ನು ಬೆಂಬಲಿಸಿದ ವಿವಿಧ ಸಂಘಟನೆಗಳ ಸದಸ್ಯರು ನಗರದ ಮೆಟ್ರೋಪೋಲ್‌ ವೃತ್ತ, ಜೆಎಲ್‌ಬಿ ರಸ್ತೆ, ಹುಣಸೂರು ಮುಖ್ಯರಸ್ತೆ, ಜಿಲ್ಲಾ ನ್ಯಾಯಾಲಯದ ಮುಂಭಾಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸೇವ್‌ ರಿವರ್‌ ಎಂಬ ಘೋಷಣೆಯುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ನದಿಗಳ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದರು.

ಅಲ್ಲದೆ 80009-80009 ಮೊಬೈಲ್‌ ಸಂಖ್ಯೆಗೆ ಮಿಸ್ಡ್ಕಾಲ್‌ ನೀಡುವ ಮೂಲಕ ನದಿಗಳ ರಕ್ಷಣೆಗಾಗಿ ಕೈಗೊಂಡಿರುವ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ರ್ಯಾಲಿ ಫಾರ್‌ ರಿವರ್‌ ಹೋರಾಟದ ಅಂಗವಾಗಿ ನಗರದ ಲಯನ್ಸ್‌ ಕ್ಲಬ್‌ ಆಫ್ ಮೈಸೂರು(ಪಶ್ಚಿಮ) ವತಿಯಿಂದ ಮಹಾರಾಣಿ ಕಾಲೇಜು ಆವರಣದಿಂದ ಜಾಥಾ ನಡೆಸಲಾಯಿತು.

ದೇಶದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉತ್ತರ ಭಾರತದಲ್ಲಿ ಅತಿವೃಷ್ಠಿಯಿಂದ ಜನರು ತೊಂದರೆ ಎದುರಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಅನಾವೃಷ್ಠಿಯಿಂದ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾ-ಕಾವೇರಿ ನದಿಗಳ ಜೋಡಣೆಯಾಗಬೇಕಿದ್ದು, ಪ್ರಧಾನಮಂತ್ರಿ ಅವರು ಈ ಬಗ್ಗೆ ಗಮನವಹಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು. ನಗರೆದೆಲ್ಲೆಡೆ ನಡೆದ ಹೋರಾಟದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಯುವಕರು, ವಯೋವೃದ್ಧರು ಸಹ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next