Advertisement

ಮುಹೂರ್ತಕ್ಕೆ ಮುನ್ನ ಮದುವೆಯಾಗಿ ಜನತಾ ಕರ್ಫ್ಯೂಗೆ ಬೆಂಬಲ

09:48 PM Mar 22, 2020 | Lakshmi GovindaRaj |

ದಾವಣಗೆರೆ: ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ವಿವಾಹ ಮುಹೂರ್ತಕ್ಕೆ ಮುನ್ನವೇ ಮದುವೆ ಆಗುವ ಮೂಲಕ ನೂತನ ವಧು-ವರರು, ಕುಟುಂಬದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯ ಶೇಖರಪ್ಪ ನಗರ ಬಿ ಬ್ಲಾಕ್‌ ನಿವಾಸಿ ಜಿ. ಅಶೋಕ್‌ ಮತ್ತು ಅದೇ ಶೇಖರಪ್ಪ ನಗರದ ವಿ. ಪವಿತ್ರಾ (ಪವಿ) ಎನ್ನುವವರ ವಿವಾಹ ನಗರದ ಶ್ರೀಮತಿ ರಾಜನಹಳ್ಳಿ ಜಾನಾಬಾಯಿ ರಾಜನಹಳ್ಳಿ ಶ್ರೀನಿವಾಸ ಮೂರ್ತಿಯವರ ಧರ್ಮಶಾಲೆಯಲ್ಲಿ ನಿಗದಿಯಾಗಿತ್ತು.

Advertisement

ಭಾನುವಾರ ಬೆಳಗ್ಗೆ 10.30ಕ್ಕೆ ಮುಹೂರ್ತ ಇತ್ತು. ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಬಲ ನೀಡಬೇಕು ಎಂಬ ಸದುದ್ದೇಶದಿಂದ ನಿಗದಿತ ಮುಹೂರ್ತಕ್ಕಿಂತಲೂ ಮುನ್ನವೇ ಇಬ್ಬರು ಮದುವೆಯಾಗುವ ಮೂಲಕ ಆದರ್ಶ ಮೆರೆದರು. ಇಡೀ ದೇಶದ ಜನರಿಗೆ ಒಳ್ಳೆಯದಾಗಲಿ ಎಂದು ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.

ನಾವು ಅದಕ್ಕಾಗಿ ಮುಹೂರ್ತಕ್ಕಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿ, ಅದರಂತೆ ಮದುವೆ ಮಾಡಿದ್ದೇವೆ. ಆ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದೇವೆ ಎಂದು ಅಶೋಕ್‌ ಸಹೋದರ ಮಣಿ ತಿಳಿಸಿದರು. ಮೋದಿ ಅವರು ಜನರಿಗೆ ಒಳ್ಳೆಯದಾಗಲಿ ಎಂದು ಇವತ್ತು ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಂಡಿದ್ದಾರೆ. ನಾವು ಅದಕ್ಕೆ ಸಪೋರ್ಟ್‌ ಮಾಡಬೇಕು ಎಂದು ಮುಹೂರ್ತಕ್ಕಿಂತಲೂ ಮೊದಲೇ ಮದುವೆ ಮಾಡಿದ್ದೇವೆ ಎಂದು ವರನ ತಂದೆ ಗಣೇಶಪ್ಪ ತಿಳಿಸಿದರು.

ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿಯವರೇ ಕರೆ ನೀಡಿದ್ದಾರೆ. ಹಂಗಾಗಿ ನಮ್ಮ ಗೆಳೆಯನ ಮದುವೆಯನ್ನ ಬೇಗನೆ ಮಾಡಿದ್ದೇವೆ ಎಂದು ಗೆಳೆಯ ಶಿವಕುಮಾರ್‌ ತಿಳಿಸಿದರು. ಅಶೋಕ್‌ ಮತ್ತು ಪವಿತ್ರ ವಿಜಯದ ಸಂಕೇತ ತೋರುವ ಮೂಲಕ ಕರ್ಫ್ಯೂಗೆ ಬೆಂಬಲ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next