ರಾಯಚೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾಜಿ ಸಿಎಂ ಬಂಗಾರಪ್ಪನವರು ಕೈಗೊಂಡ ತೀರ್ಮಾನ ಕೈಗೊಳ್ಳುವಂತಹ ಸಂದರ್ಭ ಬಂದರೆ ನಾವೆಲ್ಲ ಅವರೊಟ್ಟಿಗೆ ನಿಲ್ಲುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಆವತ್ತಿನ ಕಾನೂನು ಬೇರೆ ಇವತ್ತಿನ ಕಾನೂನು ಬೇರೆ. ಅಂದಿನ ಸಿಎಂ ಬಂಗಾರಪ್ಪನವರು ಚಿಟಿಕೆ ಹೊಡೆಯುವುದರಲ್ಲಿ ಉತ್ತರ ಕೊಟ್ಟಿದ್ದರು. ಇವತ್ತು ಕಾನೂನು ಎತ್ಲಾಗ್ ಬೇಕು ಅತ್ಲಾಗ್ ಬಂದ್ ಬಿಡುತ್ತದೆ. ಇವತ್ತು ಕಾನೂನಿಗೆ ವಿರುದ್ಧವಾಗಿ ಏನೂ ಮಾಡಲಾಗುವುದಿಲ್ಲ. ಅಂತಹ ಟೈಮ್ ಬಂದರೆ ಅದೇ ರೀತಿಯ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತೆಗೆದುಕೊಳ್ಳುತ್ತಾರೆ. ಈಗಿನ ಮುಖ್ಯಮಂತ್ರಿಗಳು ಕೂಡ ಅಂಥದ್ದೇ ಸಿದ್ದಾಂತದವರು ಎಂದರು.
ಇದನ್ನೂ ಓದಿ:Cauvery ವಿಚಾರದಲ್ಲಿ ರಾಜಕೀಯ ಬೇಡ; ಒಗ್ಗಟ್ಟಾಗಿ ಹೋರಾಟ ಮಾಡುವ: ದಿನೇಶ್ ಗುಂಡೂರಾವ್
ಶಿಕ್ಷಕರ ವರ್ಗಾವಣೆ ಅನಿವಾರ್ಯವಾಗಿತ್ತು. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖಾಲಿ ಉಳಿಯಬಹುದು ಎಂದು ಅಂದಾಜಿರಲಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಶಿಕ್ಷಕರು ಈ ಭಾಗಕ್ಕೆ ವರ್ಗಾವಣೆ ಬಯಸಿದ್ದಾರೆ. ಅತಿಥಿ ಶಿಕ್ಷಕರನ್ನು ನಿಯೋಜಿಸಿ ಕೊರತೆ ನೀಗಿಸಲಾಗುವುದು ಎಂದರು.
ಮಕ್ಕಳ ಹಾಜರಾತಿ ಹೆಚ್ಚಬೇಕು ಎಂದು ಬಂಗಾರಪ್ಪನವರು ಸಿಎಂ ಆಗಿದ್ದಾಗ ಪ್ರತಿ ಮಗುವಿಗೆ ಒಂದು ರೂ. ನೀಡುವ ಯೋಜನೆ ಜಾರಿ ಮಾಡಿದ್ದರು. ಈಗ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುತ್ತಿದ್ದೇವೆ. ಎಸ್ಸೆಸ್ಸೆಲ್ಸಿವರೆಗೂ ಮೊಟ್ಟೆ ಯೋಜನೆ ವಿಸ್ತರಿಸಿದ್ದು, ಶೀಘ್ರದಲ್ಲಿ ಪ್ರತಿ ಮಗುವಿಗೆ ಎರಡು ಮೊಟ್ಟೆ ನೀಡಲು ಕ್ರಮ ವಹಿಸಲಾಗುವುದು ಎಂದರು.