Advertisement

ಕೆಎಸ್‌ಆರ್‌ಪಿ ಸೈಕಲ್‌ ಜಾಥಾಕ್ಕೆ ಸಿನಿ ಸ್ಟಾರ್‌ಗಳ ಬೆಂಬಲ

11:42 AM Jul 24, 2017 | Team Udayavani |

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ “ಸದಾ ನಿಮ್ಮೊಂದಿಗೆ’  ಎಂಬ ಧ್ಯೇಯ ವಾಕ್ಯದೊಂದಿಗೆ ಕೆಎಸ್‌ಆರ್‌ಪಿ ಹಮ್ಮಿಕೊಂಡಿದ್ದ ಐಕ್ಯತೆ-ಸ್ವಚ್ಚತೆ ಸೈಕಲ್‌ ಜಾಥಾ ಅಭಿಯಾನಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು “ನಾವು ನಿಮ್ಮೊಂದಿಗೆ’ ಎಂಬ ಸಂದೇಶದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

ಬೀದರ್‌ನಿಂದ ಬೆಂಗಳೂರಿನವರೆಗಿನ 1,750 ಕಿಲೋ ಮೀಟರ್‌ ದೂರದ 28 ಜಿಲ್ಲೆಗಳ ವ್ಯಾಪ್ತಿಯ ಕೆಎಸ್‌ಆರ್‌ಪಿ ಸಿಬ್ಬಂದಿಯ ಸೈಕಲ್‌ ಜಾಥಾ ಮತ್ತು ಜಾಥಾದ ಉದ್ದೇಶಕ್ಕೆ ಮಾರು ಹೋಗಿರುವ ಸಿನಿ ನಟ, ನಟಿಯರು ಜಾಥಾದ ಪರವಾಗಿ ಸ್ವೆಲ್ಫಿ ವಿಡಿಯೋ ಅಭಿಯಾನ ಮೂಲಕ ಸಹಕಾರ ನೀಡಿದ್ದಾರೆ. ನಟ, ನಟಿಯರ ಈ ಕಾರ್ಯ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಪೊಲೀಸ್‌ ಅಧಿಕಾರಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಇದೇ ಜುಲೈ 25 ರಂದು  1,750 ಕಿಲೋ ಮೀಟರ್‌ ಜಾಥಾ ಮುಗಿಸಲಿರುವ ಎಡಿಜಿಪಿ ಭಾಸ್ಕರ್‌ ರಾವ್‌ ನೇತೃತ್ವದ 75 ಮಂದಿ ತಂಡ ಮಾಗಡಿ ಮೂಲಕ ಬೆಂಗಳೂರು ತಲುಪಲಿದೆ. ಈ ವೇಳೆ ಸಿನಿಮಾ ಮಂದಿ ಡ್ರೋಣ್‌ ಕ್ಯಾಮರಾಗಳನ್ನು ಬಳಸಿ ಚಿತ್ರೀಕರಣ ಮಾಡುವುದರ ಜತೆಗೆ ಅಭಿನಂದನೆ ಸಲ್ಲಿಸಲು ಮುಂದಾಗಿದ್ದಾರೆ.

ಕೋಮುಗಲಭೆಯಿಂದ ಬೂದಿ ಮುಚ್ಚಿದ ಕೆಂಡದಂತಿರುವ ಮಂಗಳೂರು-ಬಂಟ್ವಾಳದಲ್ಲಿ ಶಾಂತಿ, ನೆಮ್ಮದಿ ತರಲು ಕೆಎಸ್‌ಆರ್‌ಪಿ ಶ್ರಮಿಸಿತ್ತು. ಅಷ್ಟು ಮಾತ್ರವಲ್ಲದೇ ಯಾವುದೇ ಗಲಭೆ, ಗಲಾಟೆ ನಡೆದರೂ ಆಗ ಕೆಎಸ್‌ಆರ್‌ಪಿ ಸಿಬ್ಬಂದಿ ನಿದ್ದೆಗೆಟ್ಟು ಭದ್ರತೆ ನೀಡುತ್ತಾರೆ. ಆದರೂ ಈ ಪಡೆಯ ಮೇಲೆ ಸಾರ್ವಜನಿಕ ವಲಯದಿಂದ ಏನೋ ಅಸಡ್ಡೆಯ ಮಾತುಗಳು.

ಈ ರೀತಿ ಮಲತಾಯಿ ಧೋರಣೆಗೆ ತುತ್ತಾಗಿರುವ ಕೆಎಸ್‌ಆರ್‌ಪಿ ಸಿಬ್ಬಂದಿ ‘ಸದಾ ನಿಮ್ಮೊಂದಿಗೆ’ ಎಂದು ಜನರ ಬಳಿಗೆ ಹೊರಟಿರುವ ಈ ಹೊತ್ತಲ್ಲಿ “ನಾವು ನಿಮ್ಮೊಂದಿಗೆ’ ಎನ್ನುವ ಸಂದೇಶದ ಮೂಲಕ ಸಿನಿ ಸ್ಟಾರ್‌ಗಳು ಕೊಡುತ್ತಿರುವುದು ಸಂತೋಷದ ವಿಚಾರ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. 

Advertisement

ಪೊಲೀಸರು “ಸದಾ ನಿಮ್ಮೊಂದಿಗೆ ಎಂದು ಹೇಳುವುದೇ ಬೇಕಿಲ್ಲ. ಅವರು ಯಾವಾಗಲೂ ನಮ್ಮ ಜತೆಗೇ ಇದ್ದಾರೆ. ಅವರಿರುವ ಕಾರಣಕ್ಕೇ ನಾವು ಇಷ್ಟು ಭದ್ರವಾಗಿದ್ದೇವೆ.
-ಕಾರುಣ್ಯ ರಾಮ್‌, ನಟಿ.

ದೇಶ ಕಾಯೋರು ಸೈನಿಕರು, ಸಮಾಜ ಕಾಯೋರು ಪೊಲೀಸರು. ಇವರಿಗೆ ನಮ್ಮ ಧನ್ಯವಾದ ಹೇಳೊಣ ಎಲ್ಲರೂ ಬೆಂಬಲಿಸಿ.
-ರಘುರಾಮ್‌, ಕಲಾವಿದ

ನಾವು ಸದಾ ನಿಮ್ಮೊಂದಿಗೆ. ಕೇಳುವುದಕ್ಕೇ ಎಷ್ಟು ಖುಷಿ ಆಗತ್ತೆ? ಯಾರಾದರೂ ಸದಾ ನಮ್ಮ ಜತೆಗೆ ನಮ್ಮ ಹಿಂದೆ ಇದ್ದಾರೆ ಎನ್ನುವುದೇ ನಮಗೆ ದೊಡ್ಡ ನೆಮ್ಮದಿಯ ಭರವಸೆ. ಈ ರೀತಿ ಘೋಷಣೆ ಕೊಡದೇ ಹತ್ತಾರು ವರ್ಷಗಳಿಂದ ನಮ್ಮ ಜತೆಗಿರುವವರು ಪೊಲೀಸರು. ಅವರಿಗೆ ಧನ್ಯತೆ ಅರ್ಪಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ
-ಯಶ್‌, ನಾಯಕ ನಟ

ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭರವಸೆ ಮೂಡಿಸಲು ಪೊಲಿಸರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಸಾರ್‌, ನಾವೂ ನಿಮ್ಮೊಂದಿಗೆ ಇದ್ದೇವೆ ಸರ್‌ ಎಂದು ನಾವು ಕೂಗಿ ಹೇಳಬೇಕಿದೆ.
-ಶ್ರೀನಗರ ಕಿಟ್ಟಿ, ನಟ,

ಕಣ್ರೆಪ್ಪೆಗಳು ಕಣ್ಣನ್ನು ಕಾಪಾಡುವಂತೆ, ಪೊಲೀಸರು ನಮ್ಮನ್ನು ಕಾಪಾಡುತ್ತಿದ್ದಾರೆ. ಅವರಿಗೆ ನಮ್ಮ ಪ್ರೀತಿ, ಗೌರವ ಅರ್ಪಿಸೋಣ.
-ಸಂಜನಾ ನಟಿ.

“ನಾಡಿನ ಒಳತಿಗಾಗಿ ಸದಾ ಶ್ರಮಿಸುತ್ತಿರುವ ಪೊಲೀಸ್‌ ಬಂಧುಗಳಿಗೆ ಅಭಿನಂದನೆ ಸಲ್ಲಿಸಲು ಇದೊಂದು ಸುಸಂದರ್ಭ. ಮೀಸಲು ಪೊಲೀಸರ ಶ್ರಮ ಕಣ್ಣಿಗೆ ಕಂಡರೂ ಗ್ರಹಿಕೆಗೆ ಸಿಗುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಇಡಿ ಸಮಾಜ ಅವರಿಗೊಂದು ಧನ್ಯತೆ ಅರ್ಪಿಸಬೇಕಾಗಿದೆ’
-ನಾಗತಿಹಳ್ಳಿ ಚಂದ್ರಶೇಖರ್‌, ಸಾಹಿತಿ ಮತ್ತು ನಿರ್ದೇಶಕ 

ಮಾಗಡಿ ಬಳಿ ಅದ್ಧೂರಿ ಸ್ವಾಗತ: ನಾಡಿನ ಸುಮಾರು 2000ಕ್ಕೂ ಹೆಚ್ಚು ಹಳ್ಳಿಗಳನ್ನು ತಲುಪಿ 28 ಜಿಲ್ಲೆಗಳಲ್ಲಿ ಸಾಗಿ ಜು 25 ರಂದು ಮೈಸೂರು ಮೂಲಕ ಸೈಕಲ್‌ ಜಾಥಾದ ತಂಡ ಬೆಂಗಳೂರು ತಲುಪಲಿದೆ. ಈ ದಿನ ಮಾಗಡಿಯಲ್ಲಿ ಅದ್ದೂರಿಯಾಗಿ ಇವರನ್ನು ಸ್ವಾಗತಿಸಿಲು ಸಿನಿಮಾ ಮತ್ತು ಸಾಮಾಜಿಕ ಸಂಘಟನೆಗಳು ಸಿದ್ಧತೆ ನಡೆಸಿವೆ. ಆ ನಂತರ ಕೆಎಸ್‌ಆರ್‌ಪಿ ಮೈದಾನಕ್ಕೆ ತಂಡ ತಲುಪಿ ವಿಧಾನಸೌಧದಲ್ಲಿ ಕೊನೆಯಾಗಲಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಇಡಿ ತಂಡವನ್ನು ಅಭಿನಂದಿಸಿ ಸ್ವಾಗತಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next