Advertisement

ಬಾಲ್ಯವಿವಾಹ ಮುಕ್ತ ಸಮಾಜಕ್ಕೆ ಸಹಕರಿಸಿ: ಆರ್‌. ಚೇತನ್‌

03:11 PM Jun 05, 2018 | |

ದಾವಣಗೆರೆ: ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಸರ್ಕಾರಿ ಇಲಾಖೆ, ಅಧಿಕಾರಿಗಳ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮನವಿ ಮಾಡಿದ್ದಾರೆ.

Advertisement

ಜಿಲ್ಲಾಡಳಿತ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಹಂಗರ್‌ ಪ್ರಾಜೆಕ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೋಟೆಲ್‌ ಶಾಂತಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಕುರಿತ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆ ಮೂಲಕ ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಸಮಾಜದಲ್ಲಿ ಶೇ. 50ರಷ್ಟಿರುವ ಮಹಿಳೆಯರಿಗೆ  ಸಮಾನತೆ, ಶಿಕ್ಷಣದ ಹಕ್ಕು ಎಲ್ಲವೂ ಇವೆ. ಆದರೆ, ಸಂಕಷ್ಟಗಳು ಮಾತ್ರ ತಪ್ಪಿಲ್ಲ. ಹೆಣ್ಣು ಭ್ರೂಣದಲ್ಲಿ ಇರುವಾಗಲೇ ದೌರ್ಜನ್ಯ, ಶೋಷಣೆ, ತೊಂದರೆ ಅನುಭವಿಸುವ ವಾತಾವರಣ ಇದೆ. ಹೆಣ್ಣು ಮಕ್ಕಳು ಬೆಳೆದ ತಕ್ಷಣಕ್ಕೆ ಮದುವೆ ಮಾಡಿ, ಕರ್ತವ್ಯ ಮುಗಿಯಿತು ಎಂದು ತಿಳಿದುಕೊಳ್ಳುವ ಪೋಷಕರು ಸಹ ಇದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಮಹಿಳಾ ಸಮುದಾಯ ಎದುರಿಸುತ್ತಿರುವ ಸಮಸ್ಯೆ ವಿರುದ್ಧ ಹೋರಾಡುವ ಮೂಲಕ ಶೇ. 100ರಷ್ಟು ಮಹಿಳಾ ಶೋಷಣೆಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂದು ಅವರು ಆಶಿಸಿದರು.

ಬಾಲ್ಯವಿವಾಹದ ಮೂಲಕ ಹೆಣ್ಣು ಮಕ್ಕಳ ಹಕ್ಕು, ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗುತ್ತಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಇದೆ. ಎಲ್ಲ ಇಲಾಖೆಯವರು ಬಾಲ್ಯವಿವಾಹ ತಡೆಗೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ, ಬಾಲ್ಯವಿವಾಹ ನಡೆಯುತ್ತಲೇ ಇವೆ. ಬಾಲ್ಯವಿವಾಹದಿಂದ ಆಗುವ ಎಲ್ಲ ರೀತಿಯ ಸಮಸ್ಯೆ, ಪರಿಣಾಮಗಳ ಬಗ್ಗೆ
ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಅನ್ವಯ ಶಿಕ್ಷೆಯಾದಲ್ಲಿ ಸಮಾಜದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಒಂದಷ್ಟು ಭಯ ಬರುತ್ತದೆ. ಕಾನೂನು ಅನುಷ್ಠಾನದ ಜೊತೆಗೆ ಎಲ್ಲ ಹಂತದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಈ ಕ್ಷಣಕ್ಕೂ ಹೆಣ್ಣು ಮಗು ಎಂದರೆ ಕುಟುಂಬಕ್ಕೆ ಹೊರೆ ಎಂಬ ತಪ್ಪು ಭಾವನೆ ಇದೆ. ಮೊದಲು ಈ ಭಾವನೆ ದೂರ ಮಾಡಬೇಕು. ಹೆಣ್ಣು ಮಕ್ಕಳು ಸಮಾಜದ ಕಣ್ಣು ಎಂದು ತಿಳಿಸಬೇಕು. ಬಾಲ್ಯವಿವಾಹ ಮಾಡದಂತೆ ಜಾಗೃತಿ ಮೂಡಿಸಬೇಕು. ಒಂದೊಮ್ಮೆ ಬಾಲ್ಯವಿವಾಹ ಮಾಡಿ, ತಾಳಿ, ಕಾಲುಂಗುರ ತೆಗೆದಿಡುವುದು ಗಮನಕ್ಕೆ ಬಂದಾಗ ಅಗತ್ಯ ಕ್ರಮ ತೆಗೆದುಕೊಳ್ಳುವಂತಾಗಬೇಕು ಎಂದರು. ಪ್ರಾಸ್ತಾವಿಕ ಮಾತುಗಳಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪಾನಾಯ್ಕ, ಈ ಹಿಂದೆ ಬಾಲ್ಯವಿವಾಹ ಸಾಮಾಜಿಕ ಪಿಡುಗು ಎಂಬ ಭಾವನೆ ಇತ್ತು. ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಅನುಷ್ಠಾನಕ್ಕೆ ಬಂದ ನಂತರ ಬಾಲ್ಯವಿವಾಹ ಮಾಡುವುದು ತಪ್ಪು ಎಂಬ ಭಾವನೆ ಬಂದಿದೆಯಾದರೂ ಬಾಲ್ಯವಿವಾಹ ನಿಂತಿಲ್ಲ.

Advertisement

2017ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಕಾಯ್ದೆಗೆ ತಿದ್ದುಪಡಿ ಮಾಡಿ ಪೊಲೀಸ್‌ ಇಲಾಖೆಗೆ ಸ್ವಯಂಪ್ರೇರಣೆಯಿಂದ ಬಾಲ್ಯವಿವಾಹದ ಬಗ್ಗೆ ದೂರು ದಾಖಲಿಸಿಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು. ಈಗಲೂ ದಾವಣಗೆರೆ ಒಳಗೊಂಡಂತೆ ಹಲವಾರು ಕಡೆ ಬಾಲ್ಯವಿವಾಹ ನಡೆಯುತ್ತಲೇ ಇವೆ. 12, 16 ವರ್ಷದ ಮಕ್ಕಳೇ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

ಇನ್ನಿಲ್ಲದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳಬೇಕಿದೆ.
ಒಟ್ಟಾಗಿ ಬಾಲ್ಯವಿವಾಹ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ದಾವಣಗೆರೆ ತಹಶೀಲ್ದಾರ್‌ ಯರ್ರಿಸ್ವಾಮಿ,
ಹಂಗರ್‌ ಪ್ರಾಜೆಕ್ಟ್‌ನ ಸೋಮಶೇಖರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರ್ಣಿಮಾ ಇತರರು
ಇದ್ದರು. ನಂತರ ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಸಂವಾದದಲ್ಲಿ ಪಾಲ್ಗೊಂಡರು.

ಮದುವೆಗೆ ಹೋದ್ರೂ ಶಿಕ್ಷೆ 
ಗೊತ್ತೂ ಅಥವಾ ಗೊತ್ತಿಲ್ಲದೆಯೇ ಬಾಲ್ಯವಿವಾಹಕ್ಕೆ ಹೋದಲ್ಲಿ, ಅಕ್ಷತೆ ಹಾಕಿ, ಊಟ ಮಾಡಿದಲ್ಲಿ, ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿಕೊಟ್ಟಲ್ಲಿ, ವಾಲಗ ಊದಿದರೆ, ಕಲ್ಯಾಣ ಮಂಟಪ, ಛತ್ರ ಬಾಡಿಗೆ ಕೊಟ್ಟವರು ಕೊನೆಗೆ ಅಡುಗೆ ಮಾಡಿದವರು, ಬಡಿಸಿದವರು ಕೂಡಾ 2017 ರಲ್ಲಿ ಬಾಲ್ಯವಿವಾಹ ನಿಷೇಧ ತಿದ್ದುಪಡಿ ಕಾಯ್ದೆ ಪ್ರಕಾರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಅನ್ವಯ ಯಾರಾದರೂ ಬಾಲ್ಯವಿವಾಹದ ಬಗ್ಗೆ ದೂರು ನೀಡಿದರೆ ಮಾತ್ರವೇ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕಾಗಿತ್ತು. ಕಾಯ್ದೆಗೆ ತಿದ್ದುಪಡಿ ಮಾಡಿ ಸ್ವಯಂ ಕೇಸ್‌ ದಾಖಲಿಸಿಕೊಳ್ಳುವ
ಅಧಿಕಾರ ನೀಡಲಾಗಿದೆ. ಹಾಗಾಗಿ ಮದುವೆಗೆ ಹೋಗುವ ಮುನ್ನ ವಧು-ವರನ ವಯಸ್ಸು ಕೇಳಿ ಹೋಗುವುದೇ ಉತ್ತಮ.

ತಾಳಿ, ಕಾಲುಂಗುರ ಮಾಯ!
ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಅರ್ಹ ವಯಸ್ಸಾಗುವ ತನಕ ಮದುವೆ ಮಾಡುವುದೇ ಇಲ್ಲ ಎಂದು ಅಧಿಕಾರಿಗಳ ಮುಂದೆ ಮುಚ್ಚಳಿಕೆ ಬರೆದುಕೊಡುತ್ತಾರೆ. ಅಧಿಕಾರಿಗಳು ವಾಪಾಸ್ಸಾದ ನಂತರ ಮದುವೆ ಮಾಡಿದವರೂ ಇದ್ದಾರೆ. ಮದುವೆ ಮಾಡಿದ್ದು ಗೊತ್ತಾ ಗಬಾರದು ಎಂದು ತಾಳಿ, ಕಾಲುಂಗುರ ತೆಗೆದಿರಿಸುವ ಪೋಷಕರೂ ಇದ್ದಾರೆ.

ಬಿಡದ ಬಳ್ಳಾರಿ ವ್ಯಾಮೋಹ…
ಆರ್‌. ಚೇತನ್‌ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸಾಕಷ್ಟು ಕಾಲ ಕಳೆದರೂ ಈಗಲೂ ಬಳ್ಳಾರಿ ವ್ಯಾಮೋಹದಿಂದ ಹೊರ ಬಂದಿಲ್ಲ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಬಳ್ಳಾರಿ ವ್ಯಾಮೋಹ
ತೋರಿದ್ದರು. ಬಹಳ ದಿನಗಳ ನಂತರ ನಡೆದ ಡಿಜಿಲಾಕರ್‌… ವಿಷಯ ಕುರಿತು ಸುದ್ದಿಗೋಷ್ಠಿಯಲ್ಲೂ ಪುನರಾವರ್ತನೆ ಮಾಡಿದ್ದರು. ಸೋಮವಾರ ಹೋಟೆಲ್‌ ಶಾಂತಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಕುರಿತ ಸಮಾಲೋಚನಾ ಸಭೆಯಲ್ಲೂ ಬಳ್ಳಾರಿ ವ್ಯಾಮೋಹ ಮುಂದುವರೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next