Advertisement

ಬೊಮ್ಮಾಯಿಗೆ ಬೆಂಬಲ; ನಾಯಕತ್ವ ಬದಲಾವಣೆ ಗೊಂದಲಕ್ಕೆ ವರಿಷ್ಠರಿಂದಲೇ ತೆರೆ

01:41 AM Dec 29, 2021 | Shreeram Nayak |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಬಿಜೆಪಿ ವರಿಷ್ಠರು ತೆರೆ ಎಳೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವಕ್ಕೆ ಜೈ ಎಂದಿದ್ದಾರೆ. ಜತೆಗೆ, 2023ರ ವಿಧಾನಸಭೆ ಚುನಾವಣೆಯನ್ನೂ  ಇವರ ನೇತೃತ್ವದಲ್ಲಿಯೇ ನಡೆಸಲಾಗುವುದು ಎಂದು ಸ್ಪಷ್ಟಪಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದ್ದ ನಾಯಕತ್ವದ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ ಮಂಗಳವಾರ ಆರಂಭಗೊಂಡಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಪಕ್ಷದ ಶಾಸಕರು, ಸಚಿವರು ಹಾಗೂ ಪದಾಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರಲ್ಲದೆ, ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಗೆ ರೆಕ್ಕೆ ಪುಕ್ಕ ಕಟ್ಟಿ, ಪರ್ಯಾಯ ನಾಯಕರಾಗಲು ಕಸರತ್ತು ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಮಾಡುವುದು ಬಿಟ್ಟು ಗೊಂದಲ ಮೂಡಿಸುವುದು ಬೇಡ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಮೇಲೂ ಗೊಂದಲದ ಹೇಳಿಕೆ ನೀಡಬೇಡಿ ಎಂದು ತಾಕೀತು ಮಾಡಿದರೆನ್ನಲಾಗಿದೆ.

ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ಮುಖ್ಯ ಮಂತ್ರಿಯಾಗಿ ಮುಂದುವರಿಯುತ್ತಾರೆ. 2023ರ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸ್ಪಷ್ಟವಾಗಿ ತಿಳಿಸಿದರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯಾರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ, ಅನಗತ್ಯ ಗೊಂದಲದ ಸುದ್ದಿಗಳನ್ನು ಹರಿಬಿಡುವ ಕೆಲಸ ಮಾಡಬಾರದು ಎಂದೂ ಸೂಚಿಸಿದರು. ಕಾಂಗ್ರೆಸ್‌-ಜೆಡಿಎಸ್‌ ಬಗ್ಗೆ
ಎಷ್ಟೇ ಟೀಕೆ-ಆರೋಪಗಳನ್ನು ಮಾಡಿ. ಅದು ಬಿಟ್ಟು ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ, ಅವರಾಗುತ್ತಾರೆ, ಇವರಾಗುತ್ತಾರೆ ಎಂಬ ಹೇಳಿಕೆ ನೀಡುವುದು. ಗೊಂದಲ ಸೃಷ್ಟಿಸುವುದನ್ನು ಪಕ್ಷ ಅಶಿಸ್ತು ಎಂದು ಪರಿಗಣಿಸುತ್ತದೆ. ಇನ್ಮುಂದೆ ಆ ಕುರಿತು ಯಾರೂ ಹೇಳಿಕೆ ನೀಡುವುದು ಬೇಡ ಎಂದು ತಾಕೀತು ಮಾಡಿದರು ಎಂದು ತಿಳಿದುಬಂದಿದೆ.

Advertisement

ಬಿಟ್‌ ಕಾಯಿನ್‌ ಪ್ರಕರಣ, 40 ಪರ್ಸೆಂಟ್‌ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿನೋವಿನಿಂದ ಬಳಲುತ್ತಿದ್ದು, ಅದಕ್ಕಾಗಿ ಅಮೆರಿಕಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದನ್ನೂ ಓದಿ:ಲುಧಿಯಾನ ಕೋರ್ಟ್‌ ಸ್ಫೋಟ ಪ್ರಕರಣ : ಆರೋಪಿ ಜರ್ಮನಿಯಲ್ಲಿ ಅರೆಸ್ಟ್‌

ಚಿಕಿತ್ಸೆಗಾಗಿ ಕನಿಷ್ಠ 3 ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸಿಎಂ ಸ್ಥಾನ ತ್ಯಾಗ ಮಾಡುತ್ತಾರೆಂಬ ವದಂತಿ ಹಬ್ಬಿಸಲಾಗಿದೆ. ಅದರ ಆಧಾರದಲ್ಲೇ ಕೆಲವು ಹಿರಿಯ ಸಚಿವರು ಮುಂದಿನ ನಾಯಕತ್ವ ವಹಿಸಿಕೊಳ್ಳಲು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತ್ಯೇಕ ಸಭೆಗಳನ್ನು ಮಾಡಿದ್ದರು.

ನಾಯಕತ್ವ ಬದಲಾವಣೆ ಹಾಗೂ ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಸಹಿತ ಯಾವುದೇ ಚಟುವಟಿಕೆ ಗಳಿಗೆ ಪಕ್ಷದಲ್ಲಿ ಆಸ್ಪದವಿಲ್ಲ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಳಗಾವಿ ಸೋಲು ದೊಡ್ಡ ಆಘಾತ ನೀಡಿದ್ದು, ಅದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು ಎನ್ನಲಾಗಿದೆ.

ಹಿರಿಯ ಸಚಿವರಿಗೆ ಎಚ್ಚರಿಕೆ
ಬೆಳಗಾವಿ ಅಧಿವೇಶನದ ಸಂದರ್ಭ ದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದ ಸಚಿವ ರಾದ ಕೆ.ಎಸ್‌.ಈಶ್ವರಪ್ಪ ಹಾಗೂ ಮುರುಗೇಶ್‌ ನಿರಾಣಿ ಅವರಿಗೆ ಅರುಣ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಪಕ್ಷದಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಎಲ್ಲರ ನಡವಳಿಕೆಯನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಹಿರಿಯರ ನಡವಳಿಕೆ ವಿಪಕ್ಷಗಳಿಗೆ ಅಸ್ತ್ರ ನೀಡಿದಂತಾಗುತ್ತದೆ. ಆ ರೀತಿಯ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಬೇರೆ ರಾಜ್ಯಗಳಲ್ಲಿ ಇಲ್ಲದ ಬಿಕ್ಕಟ್ಟು ಕರ್ನಾಟಕದಲ್ಲಿ ಮಾತ್ರ ಇದೆ. ಎಷ್ಟೇ ದೊಡ್ಡವರಿದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ವಿಮಾನದಲ್ಲಿ ತಾಂತ್ರಿಕ ದೋಷ
ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ಮಂಗಳವಾರ ಬೆಳಗ್ಗೆ ಪ್ರಯಾಣಿಸಬೇಕಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಬೇರೊಂದು ವಿಶೇಷ ವಿಮಾನ ಮೂಲಕ ಮೂರೂವರೆ ತಾಸು ತಡವಾಗಿ ಹುಬ್ಬಳ್ಳಿಗೆ ಆಗಮಿಸಿದರು. ಬೆಳಗ್ಗೆ 8.45 ಗಂಟೆಗೆ ಬೆಂಗಳೂರಿನಿಂದ ಟೇಕ್‌ ಆಫ್‌ ಆಗಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಿದರು. ಸಿಎಂ ಪ್ರವಾಸ ಕಾರ್ಯಕ್ರಮದ ಅನುಸಾರ ಬೆಳಗ್ಗೆ 9.45ಕ್ಕೆ ಹುಬ್ಬಳ್ಳಿಗೆ ಆಗಮಿಸಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ವಿಮಾನ ಟೇಕ್‌ ಆಫ್‌ ಆಗಲಿಲ್ಲ. ಸಿಎಂ ಮಧ್ಯಾಹ್ನ 1.06ರ ಸುಮಾರಿಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು 1.55ರ ವೇಳೆಗೆ ಹುಬ್ಬಳ್ಳಿಗೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next