ದೇವನಹಳ್ಳಿ: ಕೃಷಿ, ಎಪಿಎಂಸಿ ತಿದ್ದುಪಡಿ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ, ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇವನಹಳ್ಳಿ ನಗರದಲ್ಲಿ ಬೆಳಗ್ಗೆಯಿಂದಲೇ ವರ್ತಕರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಎಂದಿನಂತೆ ಬಸ್ ಸಂಚಾರ, ಪೆಟ್ರೋಲ್ ಬಂಕ್, ಹಾಲು, ಔಷಧಿ, ಆಸ್ಪತ್ರೆ, ದಿನಸಿ ಅಂಗಡಿ, ತರಕಾರಿ ಅಂಗಡಿ, ಹೊಟೇಲ್, ಬ್ಯಾಂಕ್, ಸರ್ಕಾರಿ ಕಚೇರಿಗಳುಕಾರ್ಯ ನಿರ್ವಹಿಸಿದವು.
ಕೋವಿಡ್ ಭೀತಿಯಲ್ಲೂ ರಸ್ತೆಗಿಳಿದು ಪ್ರತಿಭಟಿನೆಯಲ್ಲಿ ಪಾಲ್ಗೊಂಡ ಪ್ರತಿ ಭಟನಾಕಾರರು,ಪ್ರವಾಸಿಮಂದಿರದಿಂದ ಹಳೆಬಸ್ ನಿಲ್ದಾಣದ ಮೂಲಕ ಬಜಾರ್ ರಸ್ತೆ, ಹಳೆ ತಾಲೂಕು ಕಚೇರಿ ರಸ್ತೆಯ ಮೂಲಕ ಸಂಚರಿಸಿ ಕೆಂಪೇಗೌಡ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ವಿಮಾನ ನಿಲ್ದಾಣಕ್ಕಿಲ್ಲ ಬಂದ್ ಬಿಸಿ: ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆಂಪೇ ಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಂದಿನಂತೆ ವಾಯುವಜ್ರ ಬಸ್, ಟ್ಯಾಕ್ಸಿಗಳು ಸಂಚಾರಿಸಿದವು. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಟಿಕೆಟ್ ತೋರಿಸುವಂತೆ ಆದೇಶಿಸಲಾಗಿತ್ತು. ಆದರೆ ಮುಂಜಾನೆ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಕರವೇ ಮಹಿಳಾ ಕಾರ್ಯ ಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದರು.ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.