Advertisement

ಪ್ರತ್ಯೇಕ ಧರ್ಮದ ಹೋರಾಟ ಬೆಂಬಲಿಸಿ:  ಸಿದ್ಧರಾಮ ಶ್ರೀ

11:18 AM Aug 14, 2017 | Team Udayavani |

ಬೆಳಗಾವಿ: “ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ವೈದಿಕ ಧರ್ಮದ ಶೋಷಣೆಯಿಂದ ಹೊರಬರಲು ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು’ ಎಂದು ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಮನವಿ ಮಾಡಿದರು.

Advertisement

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಆ. 22ರಂದು ನಗರದಲ್ಲಿ ನಡೆಯಲಿರುವ ಬೃಹತ್‌ ರ್ಯಾಲಿಗೆ ಪೂರ್ವಭಾವಿಯಾಗಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಲಿಂಗಾಯತ ಹಾಗೂ ವೀರಶೈವ ಒಂದೇ ಅಲ್ಲ. ಇದರಿಂದ ಯಾರೂ ಗೊಂದಲಕ್ಕೆ ಬೀಳಬಾರದು. ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ದಶಕಗಳ ಹೋರಾಟ ಈಗ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದು ನಿಂತಿದೆ. ಈ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಶಕ್ತಿ ಪ್ರದರ್ಶನ ಮಾಡಬೇಕು’ ಎಂದು ಹೇಳಿದರು.

“12ನೇ ಶತಮಾನದಲ್ಲಿ ವೈದಿಕ ಧರ್ಮ ಬಹಳ ಪ್ರಚಲಿತವಾಗಿತ್ತು. ಹಿಂದೂ ಧರ್ಮ ಎನ್ನುವ ಪದ ಪ್ರಯೋಗ ಈಚೆಗೆ ಬಳಕೆಗೆ ಬಂದಿದೆ. ಭಗವದ್ಗೀತೆಯ ಯಾವ ಶ್ಲೋಕದಲ್ಲಿಯೂ ಹಿಂದೂ ಎನ್ನುವ ಪದದ ಬಳಕೆ ಇಲ್ಲ. ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಹಿಂದೂ ಪದ ಬಳಸಲಾಗಿದೆ’ ಎಂದರು. “ವೈದಿಕ ಧರ್ಮದಲ್ಲಿ ವರ್ಣ ಮತ್ತು ವರ್ಗದ ತಾರತಮ್ಯವಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ವರ್ಗಗಳಿದ್ದವು. ಪರಿಶಿಷ್ಟರನ್ನು ಪಂಚಮ ವರ್ಗ ಎಂದು ಕರೆಯಲಾಗುತ್ತಿತ್ತು. ವರ್ಣಗಳ ಆಧಾರದ ಮೇಲೆ ಕೀಳಾಗಿ ಕಾಣುವ ವೈದಿಕ ಧರ್ಮ ನನಗೆ ಬೇಡ  ಎಂದು ಬಸವಣ್ಣ ಅದನ್ನು ಧಿಕ್ಕರಿಸಿ ಹೊರಬಂದರು’ ಎಂದು ಸಿದ್ಧರಾಮ ಸ್ವಾಮಿಗಳು ಹೇಳಿದರು.

ಅಸಮಾನತೆ ಮುಕ್ತವಾದ ಹಾಗೂ ಸರ್ವ ಸಮಾನತೆ ಸಾರುವ ಲಿಂಗಾಯತ ಧರ್ಮವನ್ನು ಬಸವಣ್ಣ ಬಹಳ ಹಿಂದೆಯೇ ಹುಟ್ಟುಹಾಕಿದ್ದರು. ಇದಕ್ಕೆ ಬಹಳಷ್ಟು ಪುರಾವೆಗಳಿವೆ. ವಚನ ಸಾಹಿತ್ಯದ ಅಧ್ಯಯನದಿಂದ ಇದು ದೃಢಪಟ್ಟಿದೆ. ಲಿಂಗಾಯತದ ಒಂದು ಶಾಖೆಯಾಗಿರುವ ವೀರಶೈವ 19ನೇ ಶತಮಾನದಿಂದಿಚೆಗೆ ಪ್ರಚಲಿತದಲ್ಲಿದೆ. ಆದರೆ ವೀರಶೈವರಲ್ಲಿ ಇನ್ನೂ ವರ್ಣಾಶ್ರಮ ವ್ಯವಸ್ಥೆ ಇದೆ. ಅದೇ ಲಿಂಗಾಯತದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವ ವ್ಯವಸ್ಥೆ ಇದೆ ಎಂದರು. ಸಭೆಯಲ್ಲಿ ಸಮಾಜದ ಮುಖಂಡರಾದ ಮಹಾಂತ ದೇಸಾಯಿ, ಎ.ಐ. ಪಾಟೀಲ, ಬಿ.ಎಸ್‌. ತೋರಣಗಟ್ಟಿ, ಸತೀಶ ಚೌಗಲಾ, ಶಂಕರ ಗುಡಸ್‌ ಉಪಸ್ಥಿತರಿದ್ದರು.

ಪ್ರತ್ಯೇಕ ಧರ್ಮ ಕುರಿತು ಕಾನೂನು ಪ್ರಕಾರ ಕ್ರಮ
ಕಲಬುರಗಿ: “ನಾನು ವೀರಶೈವ ಮತ್ತು ಲಿಂಗಾಯತ ಎಂದು ಒಡೆಯುತ್ತಿಲ್ಲ. ನಮಗೆ ವೀರಶೈವರು ಹಾಗೂ ಲಿಂಗಾಯತರು ಸೇರಿಕೊಂಡು ಮನವಿ ಸಲ್ಲಿಸಿದ್ದಾರೆ. ಯಾರಿಗೆ ಕಾನೂನು, ಧರ್ಮ ಹಾಗೂ ಜನರ ಒಪ್ಪಿಗೆ ಸಿಗುತ್ತದೋ ಅವರಿಗೆ ಸ್ವತಂತ್ರ ಧರ್ಮ ನೀಡಲು ಶಿಫಾರಸು ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, “ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಸನ್ಮಾನ ಮಾಡಿ, ವೀರಶೈವ-ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮಕ್ಕಾಗಿ  ಶಿಫಾರಸು ಮಾಡುವಂತೆ ಮನವಿ ಸಲ್ಲಿಸಲಾಯಿತು. ಇದರಿಂದ ವಿವಾದ ಉಂಟಾಗಿದೆ. ಈಗ ವೀರಶೈವರು ಮತ್ತು ಲಿಂಗಾಯ ತರು ಮನವಿ ಸಲ್ಲಿಸಿದ್ದಾರೆ. ಕಾನೂನು ಮತ್ತು ಧರ್ಮದ ಚೌಕಟ್ಟಿನಲ್ಲಿ ಇರುವುದನ್ನು ನಮ್ಮ ಸರಕಾರ ಮಾಡುತ್ತದೆ. ಎರಡನ್ನು ಒಂದು ಮಾಡಲು ನಾವೇಕೆ? ಸ್ವಾಮೀಜಿಗಳಿದ್ದಾರೆ, ಮಠಾಧೀಶರಿದ್ದಾರೆ. ಮುಖಂಡರಿದ್ದಾರೆ. ಎಲ್ಲವನ್ನೂ ಬಗೆ ಹರಿಸಿಕೊಳ್ಳಬಹುದು’ ಎಂದರು.

Advertisement

ಸನಾತನ ಹಿಂದೂ ಸಂಸ್ಕೃತಿಯ ಭಾಗವಾಗಿ ಹಾಗೂ ಆಚರಣೆಯಡಿ ಬೆಳೆದು ಬಂದಿರುವ ವೀರಶೈವ- ಲಿಂಗಾಯತ ಸಮುದಾಯದವರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆ ಇಲ್ಲ. ಲೋಕಾರೂಢಿಯಲ್ಲಿ ಲಿಂಗಾಯತ ಎಂದು ಕರೆಯುತ್ತಿದ್ದು, ವೀರಶೈವವೇ ಪರಿಪೂರ್ಣ ಅರ್ಥ ನೀಡುವ ಗ್ರಂಥಸ್ಥ ಶಬ್ದವಾಗಿದೆ. 
ವಾಮದೇವ ಶಿವಾಚಾರ್ಯ, ಅಖೀಲ ಭಾರತ ಶಿವಾಚಾರ್ಯರ ಸಂಸ್ಥೆ ಕೋಶಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next