ಚಾಮರಾಜನಗರ: ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧರಿಸಲಾಗುತ್ತಿರುವ ಮಾಸ್ಕ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಿದಂತೆ ಮಾಸ್ಕ್ಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಏತನ್ಮಧ್ಯೆ ಮಾಸ್ಕ್ಗಳ ಅವಶ್ಯಕತೆಯನ್ನರಿತ ಮಹಿಳಾ ಸ್ವ ಸಹಾಯ ಸಂಘವೊಂದು ಗುಣಮಟ್ಟದ ಮರುಬಳಕೆಯ ಮಾಸ್ಕ್ಗಳನ್ನು ತಯಾರಿಸಿ, ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಪೂರೈಸಲು ಮುಂದಾಗಿದೆ.
ತಾಲೂಕಿನ ಗೂಳಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಭುವನೇಶ್ವರಿ ಮಹಿಳಾ ಸ್ವ ಸಹಾಯ ಸಂಘ ಈ ಉಪಕ್ರಮ ಕೈಗೊಂಡಿದೆ. ಜಿಲ್ಲಾ ಪಂಚಾಯ್ತಿಯ ಎನ್.ಆರ್.ಎಲ್.ಎಂ. ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಕಾರ್ಯಕ್ರಮದಡಿ ಸಾಲ ಸೌಲಭ್ಯ ಪಡೆದು, ಹೊಲಿಗೆ ಯಂತ್ರಗಳನ್ನು ಖರೀದಿಸಿ, ಸ್ವ ಉದ್ಯೋಗ ಭುವನೇಶ್ವರಿ ಮಹಿಳಾ ಸ್ವ ಸಹಾಯ ಸಂಘ ಸ್ವ ಉದ್ಯೋಗ ಕೈಗೊಂಡಿದೆ. ಸಂಘದ ನಾಗರತ್ನಮ್ಮ, ರಾಜಮ್ಮಣ್ಣಿ ಹಾಗೂ ಭಾಗ್ಯಮ್ಮ ಎಂಬುವವರು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ.
ಮಹಿಳೆಯರ ಜನಸ್ನೇಹಿ ಕ್ರಮ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಉಂಟಾಗಿರುವ ಮಾಸ್ಕ್ಗಳ ಬೇಡಿಕೆಯನ್ನರಿತ ಈ ಮೂವರು ಮಹಿಳೆಯರು ಸಾಮಾನ್ಯರಿಗೂ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಉತ್ತಮ ರೀತಿಯ ಬಟ್ಟೆ, ಹತ್ತಿ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯಲ್ಲಿ ಮಾಸ್ಕ್ಗಳನ್ನು ಹೊಲಿಯಲಾಗಿದೆ. ಮಾಸ್ಕ್ಗಳು ಗುಣಮಟ್ಟದ್ದಾಗಿದ್ದು, ಬೆಲೆಯೂ ಕೂಡ ಅತೀ ಕಡಿಮೆ ಇದೆ.
ಎಲ್ಲೆಲ್ಲಿ ಲಭ್ಯ?: ಭುವನೇಶ್ವರಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ತಾವು ತಯಾರಿಸಿದ ಮಾಸ್ಕ್ಗಳನ್ನು ಆರೋಗ್ಯ ಇಲಾಖೆ ಹಾಗೂ ಇತರೆ ಔಷಧಾಲಯಗಳಿಗೆ ಕಡಿಮೆ ದರದಲ್ಲಿ ಸರಬರಾಜು ಮಾಡುತ್ತಿದ್ದಾರೆ. ಎನ್.ಆರ್.ಎಲ್.ಎಂ. ಯೋಜನೆಯಡಿ ಕೈಗೊಂಡಿರುವ ಚಟುವಟಿಕೆಗಳಿಗೆ ಉತ್ತೇಜಿಸಬೇಕಿದೆ. ನಾಗರತ್ನಾ ಅವರ ದೂರವಾಣಿ ಸಂಖ್ಯೆ: 6362911940 ಆಗಿದ್ದು, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾಗಿದೆ.
ಜಿಪಂನ ಎನ್‌ಆರ್‌ಎಲ್‌ಎಂ ಯೋಜನೆಯಡಿ ನಮಗೆ ಮಾಸ್ಕ್ ಹೊಲಿಯಲು ತರಬೇತಿ ನೀಡಿದ್ದಾರೆ. ಆರೋಗ್ಯ ಇಲಾಖೆ ನಿರ್ದೇಶನದಂತೆ ಮರುಬಳಕೆ ಮಾಡಬಹುದಾದ ಮಾಸ್ಕ್ ತಯಾರಿಸಲಾಗಿದೆ. ಈಗ 700 ಮಾಸ್ಕ್ ಹೊಲಿದಿದ್ದೇವೆ. ಮಾಸ್ಕ್ಗಳ ಬೆಲೆಯನ್ನು 25-30 ರೂ. ನಿಗದಿ ಮಾಡಲಾಗಿದೆ.
-ನಾಗರತ್ನಾ, ಭುವನೇಶ್ವರಿ ಸ್ವಸಹಾಯ ಸಂಘ