ಚಿತ್ರದುರ್ಗ: ಎಂಎಫ್‌ಎಲ್ ಹಾಗೂ ಆರ್‌ಸಿಎಫ್ ರಸಗೊಬ್ಬರ ಸಂಸ್ಥೆಗಳಿಂದ ಇನ್ನೆರಡು ದಿನಗಳಲ್ಲಿ 916 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಲಿದ್ದು, ಜಿಲ್ಲೆಯಾದ್ಯಂತ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸದಾಶಿವ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮಠಾಧೀಶರ ಪ್ರಯತ್ನದಿಂದ ಹಾಗೂ ರಾಜ್ಯ ಕೃಷಿ ಸಚಿವರ ವಿಶೇಷ ಪ್ರಯತ್ನ ಮತ್ತು ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವರ ಸಹಕಾರದಿಂದ ಜಿಲ್ಲೆಗೆ ಎಂಎಫ್‌ಎಲ್ (ಮದ್ರಾಸ್ ಫರ್ಟಿಲೈಸರ್ ಲಿಮಿಟೆಡ್) ವತಿಯಿಂದ 516.06 ಮೆ. ಟನ್ ಹಾಗೂ ಆರ್‌ಸಿಎಫ್ (ರಾಷ್ಟ್ರೀಯ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ ಲಿಮಿಟೆಡ್) ಸಂಸ್ಥೆ ವತಿಯಿಂದ 400 ಮೆ. ಟನ್ ಸೇರಿದಂತೆ 916 ಟನ್ ಯೂರಿಯಾ ರಸಗೊಬ್ಬರ ಎರಡು ದಿವಸಗಳಲ್ಲಿ ಪೂರೈಕೆಯಾಗಲಿದೆ. ರೈತರು ಆತಂಕ ಪಡದೇ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೂರಿಯಾ ರಸಗೊಬ್ಬರ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗಿದ್ದು, ಮೆಕ್ಕೆಜೋಳ, ರಾಗಿ, ಶೇಂಗಾ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಜುಲೈ ಅಂತ್ಯಕ್ಕೆ ಜಿಲ್ಲೆಗೆ ಸರಬರಾಜಾಗಬೇಕಾದ ಯೂರಿಯಾ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಾಸವಾದ ಕಾರಣ ಕೆಲ ಭಾಗಗಳಲ್ಲಿ ಯೂರಿಯಾ ಕೊರತೆಯಾಗಿದೆ. ಜಿಲ್ಲೆಯ ಎಲ್ಲಾ ಖಾಸಗಿ ಕೃಷಿ ಪರಿಕರ ಮಾರಾಟಗಾರರಿಂದ ರೈತರಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರವನ್ನು ಪೂರೈಸಲು ಕೃಷಿ ಅಧಿಕಾರಿಗಳ ಉಸ್ತುವಾರಿಯಲ್ಲಿ 1 ಎಕರೆಗೆ 1 ಪ್ಯಾಕೆಟ್ ನಂತೆ ವಿತರಿಸಲಾಗುವುದು. ಚಿತ್ರದುರ್ಗ ತಾಲೂಕಿನಲ್ಲಿ 6 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಎಂಎಫ್‌ಎಲ್ 88.65 ಮೆ.ಟನ್ ಹಾಗೂ ಆರ್‌ಸಿಎಫ್ 34.2 ಮೆ.ಟನ್ ಯೂರಿಯಾ ಹಂಚಿಕೆಯಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ 13 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಎಂಎಫ್‌ಎಲ್ 300.6 ಮೆ.ಟ ಹಾಗೂ ಆರ್‌ಸಿಎಫ್ 265.95 ಮೆ.ಟನ್, ಹಂಚಿಕೆಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 1 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಎಂಎಫ್‌ಎಲ್ 15.3 ಮೆ.ಟನ್ ಹಂಚಿಕೆಯಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 7 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಎಂಎಫ್‌ಎಲ್ 87.75 ಮೆ. ಟನ್ ಹಾಗೂ ಆರ್‌ಸಿಎಫ್ 17.1 ಮೆ.ಟನ್ ಹಂಚಿಕೆಯಾಗಿದೆ. ಹಿರಿಯೂರು ತಾಲೂಕಿನಲ್ಲಿ 3 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಎಂಎಫ್‌ಎಲ್ 87.75 ಮೆ.ಟ ಹಾಗೂ ಆರ್‌ಸಿಎಫ್ 50 ಮೆ. ಟನ್ ಹಂಚಿಕೆಯಾಗಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ 1 ಸಗಟು, ಚಿಲ್ಲರೆ ಮಾರಾಟಗಾರರಿದ್ದು, ಆರ್‌ಸಿಎಫ್ 36 ಮೆ. ಟನ್ ಯೂರಿಯಾ ರಸಗೊಬ್ಬರ ಹಂಚಿಕೆಯಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಎಫ್‌ಐಡಿ ಬಿತ್ತನೆಯಾದ ಹಿಡುವಳಿ ವಿಸ್ತೀರ್ಣದ ವಿವರಗಳನ್ನು ಸಲ್ಲಿಸಬೇಕು. ಯೂರಿಯಾ ಪಡೆದುಕೊಂಡು ಪಿಒಎಸ್ ಮಷಿನ್‌ನಲ್ಲಿ ನಗದು ರಸೀದಿಯನ್ನು ಪಡೆಯಬೇಕು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.