ತಾನಾಯಿತು ತನ್ನ ಕೆಲಸವಾಯಿತು ಎಂದು ಬಾರ್‌ನಲ್ಲಿ ಸಪ್ಲೇಯರ್ ಕೆಲಸ ಮಾಡಿಕೊಂಡು ಆರಾಮಾಗಿದ್ದ ಅನಾಥ ಹುಡುಗ ಶಂಕರ. ಇಂಥ ಶಂಕರನ ಜೀವನದಲ್ಲಿ ಎಲ್ಲವೂ ಸಲೀಸಾಗಿ ನಡೆಯುತ್ತಿದೆ ಎನ್ನುವಾಗಲೇ ಪುಣ್ಯ ಎಂಬ ಹುಡುಗಿಯೊಬ್ಬಳ ಆಗಮನವಾಗುತ್ತದೆ. ಮೊದಲ ನೋಟದಲ್ಲೇ ಶಂಕರನ ಹೃದಯಕ್ಕೆ ಕನ್ನ ಹಾಕುವ ಹುಡುಗಿ ಪುಣ್ಯಳನ್ನು, ಅಂತೂ ಇಂತೂ ಒಲಿಸಿಕೊಳ್ಳುವಲ್ಲಿ “ಸಪ್ಲೇಯರ್ ಶಂಕರ’ ಕೂಡ ಯಶಸ್ವಿಯಾಗುತ್ತಾನೆ. ಇನ್ನೇನು ಅನಾಥನಾಗಿ ಒಂಟಿಯಾಗಿ ಬೆಳೆದಿರುವ ಶಂಕರ ಹುಡುಗಿಯ ಕೈ ಹಿಡಿದು ಜಂಟಿಯಾಗುತ್ತಾನೆ, ತನ್ನದೇ ಸಂಸಾರ ಕಟ್ಟಿಕೊಳ್ಳುತ್ತಾನೆ ಎನ್ನುವಾಗಲೇ ಶಂಕರನ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತದೆ. ಸೈಲೆಂಟ್ ಶಂಕರ ನೋಡನೋಡುತ್ತಿದ್ದಂತೆ ವೈಲೆಂಟ್ ಆಗುತ್ತಾನೆ. ನಂತರ ಬಿಳಿ ಪರದೆ ಮೇಲೆ ನಡೆಯುವುದೆಲ್ಲ “ರಕ್ತ ಚರಿತ್ರೆ’
ಇದು ಈ ವಾರ ತೆರೆಗೆ ಬಂದಿರುವ “ಸಪ್ಲೇಯರ್ ಶಂಕರ’ ಸಿನಿಮಾದ ಒಂದಷ್ಟು ವಿವರಣೆ. ಇವಿಷ್ಟು ಹೇಳಿದ ಮೇಲೆ “ಸಪ್ಲೇಯರ್ ಶಂಕರ’ ಲವ್, ಆ್ಯಕ್ಷನ್ ಕಂ ಕ್ರೈಂ ಶೈಲಿಯ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೊದಲರ್ಧ ಅಲ್ಲೇ ಸುತ್ತುತ್ತ ಸಾಗುವ ಶಂಕರನ ಕಥೆ ಮಧ್ಯಂತರದ ನಂತರ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಕಾಣದ ಲೋಕವೊಂದನ್ನು ಪರಿಚಯಿಸುತ್ತದೆ. ಒಂದು ಸರಳ ಕಥೆಯನ್ನು ಇನ್ನಿಲ್ಲದಷ್ಟು ರಕ್ತಸಿಕ್ತವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಇನ್ನು ನಿಶ್ಚಿತ್ ಕರೋಡಿ ತಮ್ಮ ಪಾತ್ರವನ್ನು ನಿಭಾಯಿಸಲು ಸಾಕಷ್ಟು ಪರಿಶ್ರಮ ಹಾಕಿರು ವುದು ಪ್ರತಿ ಫ್ರೆàಮ್‌ನಲ್ಲೂ ಕಾಣುತ್ತದೆ. ನಾಯಕಿ ದೀಪಿಕಾ ಆರಾಧ್ಯ ತೆರೆಮೇಲೆ ಇರುವಷ್ಟು ಹೊತ್ತು ಲವಲವಿಕೆಯ ಅಭಿನಯ ನೀಡಿದ್ದಾರೆ. ಇಡೀ ಸಿನಿಮಾದಲ್ಲಿ ಆರಂಭದಿಂದ ಅಂತ್ಯದ ವರೆಗೂ ಗಮನ ಸೆಳೆಯುವುದು ನಟ ಗೋಪಾಲ ಕೃಷ್ಣ ದೇಶಪಾಂಡೆ ಅಭಿನಯ. ಉಳಿದ ಕಲಾವಿದರ ಬಗ್ಗೆ ಹೆಚ್ಚೇನು ಹೇಳಲಾಗದು.
ಒಟ್ಟಾರೆ ಒಂದಷ್ಟು ಮಾಸ್ ಅಂಶಗಳನ್ನು ಇಟ್ಟು ಕೊಂಡು ತೆರೆಗೆ ಬಂದಿರುವ “ಸಪ್ಲೇಯರ್ ಶಂಕರ’ನನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ಜಿ. ಎಸ್. ಕೆ ಸುಧನ್