Advertisement
ಸಮಯಪಾಲನೆ: ಬೇರೆ ಬೇರೆ ಕಾರಣಗಳಿಂದ ಯಕ್ಷಗಾನಗಳು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭವಾಗುವುದು ಈಗ ಸರ್ವೇಸಾಮಾನ್ಯ. ಇದರಲ್ಲಿ ಕಲಾವಿದರ ಕೊಡುಗೆಯೂ ಇದೆ. ಇದು ಪ್ರೇಕ್ಷಕರಲ್ಲಿ ವ್ಯತಿರಿಕ್ತ ಪರಿಣಾಮ ಬೀರಿ ಅವರು ಜಾಗ ಖಾಲಿ ಮಾಡಿ ದರೆ ಪ್ರದರ್ಶನ ಸಫಲವಾಗದು. ಆದ್ದರಿಂದ ಸಮಯಪಾಲನೆ ಅತಿ ಮುಖ್ಯ.
Related Articles
Advertisement
ಭಾಷಾಪ್ರೌಢಿಮೆ: ಯಕ್ಷಗಾನದಷ್ಟು ವಾಕ್ಚಾತುರ್ಯ, ಭಾಷಾಪ್ರೌಢಿಮೆ ಪ್ರದರ್ಶಿಸುವ ಕಲೆ ಬೇರೊಂದಿಲ್ಲ ಎನ್ನಬಹುದು. ಇಲ್ಲಿ ಕಲಾವಿದರಿಗೆ ಹಳೆ ಗನ್ನಡ, ಸಂಸ್ಕೃತ, ವ್ಯಾಕರಣದ ಜ್ಞಾನವಿದ್ದರಂತೂ ಮಾತು ನಿರರ್ಗಳ ಹಾಗೂ ಕೇಳಲು ಸೊಗಸು. ಹಾಗೆಂದು ಸಂಸ್ಕೃತದ ಅತಿಯಾದ ಬಳಕೆ ಭಾಷಾ ಪ್ರೌಢಿಮೆಯಿಲ್ಲದ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು. ಅಗತ್ಯ ಇರುವಲ್ಲಿ ಬಳಸಲು ಬೇಕಾದಷ್ಟು ಹಳೆಗನ್ನಡ ಹಾಗೂ ಸಂಸ್ಕೃತದ ಬಗ್ಗೆ ಕಲಾವಿದರು ತಿಳಿದುಕೊಂಡಿರುವುದು ಒಳಿತು. ಮೊದಮೊದಲು ತೊದಲುತ್ತಿದ್ದ ಕಲಾವಿದರೂ ಕ್ರಮೇಣ ರಂಗದಲ್ಲೇ ಕಲಿತು ಪ್ರೌಢರಾಗಿ ನಿರರ್ಗಳವಾಗಿ ಮಾತನಾಡುವುದನ್ನೂ ನಾವು ನೋಡುತ್ತೇವೆ.
ಕಾಲಜ್ಞಾನ: ಕಾಲಜ್ಞಾನದ ಬಗ್ಗೆ ಕಲಾವಿದ ತುಂಬಾ ಎಚ್ಚರದಿಂದಿರಬೇಕು. ಪ್ರಸಂಗ ಕೃತಯುಗ¨ªೋ, ತ್ರೇತಾಯುಗದ್ದೋ , ದ್ವಾಪರದ್ದೋ ಅಥವಾ ಕಲಿಯುಗದ್ದೋ ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು ಹಾಗೂ ಅದಕ್ಕೆ ತಕ್ಕಂತೆ ಮಾತುಗಳಿರಬೇಕು. ಇನ್ನೂ ಸಂಭವಿಸದ ಘಟನೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಉದಾಹರಣೆಗೆ ಪಂಚವಟಿ ಪ್ರಸಂಗದ ರಾಮ ಆಸೇತು ಹಿಮಾಚಲದವರೆಗೆ ಸೂರ್ಯ ವಂಶದವರ ಸಾಮ್ರಾಜ್ಯವಿದೆ ಎನ್ನಬಾರದು. ಯಾಕೆಂದರೆ ಲಂಕೆಗೆ ಸೇತುವೆ ನಿರ್ಮಾಣ ವಾಗುವುದು ಪಂಚವಟಿ ಪ್ರಸಂಗದ ಅನಂತರವಲ್ಲವೇ?
ಬೆಳಕು ಮತ್ತು ಧ್ವನಿ: ಸಂಯೋಜನೆ ಪಂಜಿನ ಬೆಳಕಿನಲ್ಲಿ, ಧ್ವನಿವರ್ಧಕದ ವ್ಯವಸ್ಥೆ ಇಲ್ಲದ ಕಾಲಕ್ಕೆ ಬೆಳಕು ಮತ್ತು ಧ್ವನಿ ಸಂಯೋಜನೆ ಸಾಧ್ಯವಿರಲಿಲ್ಲ. ಈಗಿನ ತಂತ್ರಜ್ಞಾನದ ಬೆಳವಣಿಗೆ ಯಕ್ಷರಂಗಕ್ಕೆ ವರವೂ ಹೌದು, ಶಾಪವೂ ಹೌದು. ಧ್ವನಿವರ್ಧಕ ಸ್ಪಷ್ಟವಾಗಿರದಿದ್ದರೆ ಸಂಭಾಷಣೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಎರಡೆರಡು ಬಾರಿ ಕೇಳುವಂಥ ಪ್ರತಿಧ್ವನಿಸುವ ಧ್ವನಿವರ್ಧಕ ವ್ಯವಸ್ಥೆ ಇರಬಾರದು. ಸರಿಯಾದ ಪ್ರಖರತೆ ಮತ್ತು ಬಣ್ಣಗಳನ್ನು ಉಪಯೋಗಿಸಿದ ಬೆಳಕಂತೂ ಸನ್ನಿವೇಶವನ್ನು ಮತ್ತಷ್ಟು ಪ್ರಭಾವಶಾಲಿಯಾಗಿಸಬಲ್ಲದು. ಡಿಸ್ಕೋಲೈಟ್, ಅತಿ ಪ್ರಖರವಾದ ಬೆಳಕಿನ ಬಳಕೆ ಪ್ರೇಕ್ಷಕರು ಹಾಗೂ ಕಲಾವಿದರಿಗೂ ಆಯಾಸ ಉಂಟುಮಾಡೀತು. ಧ್ವನಿವರ್ಧಕ ಮತ್ತು ಬೆಳಕು ಸಮರ್ಪಕವಾಗಿದ್ದರೆ ವೇಷಭೂಷಣ ಮತ್ತು ಹೆಜ್ಜೆಗಾರಿಕೆಯ ಕೆಲವು ಕೊರತೆಗಳನ್ನು ಮರೆಮಾಚಬಹುದು.
ರಂಗಸೌಜನ್ಯ: ರಂಗದ ಮೇಲೆ ಸಹಕಲಾವಿದರಿಗೆ ಕೊಡುವ ಸಹಕಾರ ಮತ್ತು ಗೌರವ, ಹಿಮ್ಮೇಳ-ಮುಮ್ಮೇಳಗಳ ನಡುವೆ ಇರುವ ತಾಳಮೇಳವೇ ರಂಗಸೌಜನ್ಯ. ಪ್ರಸಿದ್ಧ ಕಲಾವಿದರು ಚಿಗುರುತ್ತಿರುವ ಪ್ರತಿಭೆಗಳನ್ನು ರಂಗ ದಲ್ಲಿ ಚಿವುಟಬಾರದು. ಚೌಕಿಯ ಜಗಳವನ್ನು ರಂಗಕ್ಕೆಳೆಯಬಾರದು. ವೇಷ ಧಾರಿಗಳ ಮಾತಿನಲ್ಲಿರುವ ವೈಯಕ್ತಿಕ ದ್ವೇಷ, ವ್ಯಂಗ್ಯ ಇತ್ಯಾದಿಗಳನ್ನು ಪ್ರೇಕ್ಷಕರು ಗುರುತಿಸಬಲ್ಲರು. ಇದರಿಂದಾಗಿ ಪ್ರೇಕ್ಷಕರು ಕಲಾವಿದರಿಗೆ ಕೊಡುವ ಗೌರವ ಕಡಿಮೆಯಾದೀತು. ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಮನ್ವಯ ಅತಿ ಅಗತ್ಯ. ಏನಾದರೂ ತಪ್ಪುಗಳು ಘಟಿಸಿದರೆ ಇಂಥ ಸಮನ್ವ ಯತೆಯಿಂದ ಅದನ್ನು ಪ್ರೇಕ್ಷಕರಿಗೆ ತಿಳಿಯದಂತೆ ನಿಭಾಯಿಸಬಹುದು.
ವೈಯಕ್ತಿಕತೆ ಮತ್ತು ಸಾಮೂಹಿಕತೆ: ಯಕ್ಷಗಾನವು ಒಂದು ಸಾಮೂಹಿಕ ಕಲೆ. ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಪ್ರಾಧಾನ್ಯವಿದೆ. ಯಾವುದೇ ಕಲಾವಿದನೂ ತನ್ನ ವೈಯಕ್ತಿಕ ಪ್ರಶಂಸೆಗಾಗಿ ಅತಿಯಾದ ಪಾಂಡಿತ್ಯ ಪ್ರದರ್ಶ ನಕ್ಕಿಳಿಯುವುದು ಅಥವಾ ಗಂಟೆಗಟ್ಟಲೆ ಕುಣಿಯುವುದು ಪ್ರೇಕ್ಷಕರಿಗೆ ಕಿರಿಕಿರಿ ಯುಂಟುಮಾಡುತ್ತದೆ. ಹಿತಮಿತವಾದ ಅರ್ಥಪೂರ್ಣ, ಸಂದ ರ್ಭೋಚಿತ ಮಾತುಗಾರಿಕೆ, ಪಾತ್ರೋಚಿತ ಮತ್ತು ಸನ್ನಿವೇಶಕ್ಕೆ ಹೊಂದುವ ಹೆಜ್ಜೆಗಾರಿಕೆ ಇದ್ದರೆ ಮಾತ್ರ ಯಕ್ಷಗಾನ ಕಳೆಗಟ್ಟುತ್ತದೆ. ಭಾಗವತರಿಂದ ಅತಿಯಾದ ಆಲಾಪನೆ, ಪದ್ಯದ ಸಾಲುಗಳ ಹತ್ತಾರು ಬಾರಿಯ ಪುನರಾವರ್ತನೆ, ಇತ್ಯಾದಿ ಗಳು ಪ್ರೇಕ್ಷಕರನ್ನು ನಿದ್ದೆಗಿಳಿಸುತ್ತವೆ ಅಥವಾ ಅರ್ಧದಲ್ಲಿ ಮನೆಗೆ ಕಳುಹಿಸುತ್ತವೆ. ಹೀಗಾಗಿ ಕಲಾವಿದರು ಇತಿಮಿತಿಯನ್ನರಿತು ನಡೆದರೆ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳಬಹುದು.ಒಂದು ಯಕ್ಷಗಾನ ಪ್ರದರ್ಶನವೆಂದರೆ ಅದು ಬಹಳಷ್ಟು ಜನರು ಒಂದಾಗಿ ಸಮನ್ವಯದಿಂದ ಪ್ರದರ್ಶಿಸುವ ಕಲೆ. ಈ ಎಲ್ಲ ಅಂಶಗಳತ್ತ ಗಮನ ಹರಿಸಿದರೆ ಯಕ್ಷಗಾನ ಪ್ರದರ್ಶನವು ಮತ್ತಷ್ಟು ರುಚಿ
ಕರವಾಗಿ ಪ್ರೇಕ್ಷಕರ ಮಹಾಪೂರವನ್ನೇ ಆಕರ್ಷಿಸಬಹುದು. ಡಾ| ಸತೀಶ ನಾಯಕ್,ಆಲಂಬಿ