Advertisement

ಆರ್ಥಿಕ ಕೊರತೆ ನಿರ್ವಹಣೆ ಅಭಿವೃದ್ಧಿಗೆ ಪೂರಕ

06:00 AM Feb 02, 2018 | Team Udayavani |

ದೇಶದ ಅಪಾರ ಜನರ ನಿರೀಕ್ಷೆಯಂತೆ ಬಜೆಟ್‌ನಲ್ಲಿ ಜನ ಸಾಮಾನ್ಯರು ಹಾಗೂ ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ. ಜನರ ಕುಂದುಕೊರತೆಗೆ ಸ್ಪಂದಿಸುವ ಆಶಯವಿರುವ ಆರ್ಥಿಕತೆ ಅಭಿವೃದ್ಧಿಗೆ ಪೂರಕ ಎನಿಸಿದೆ. 15 ವರ್ಷಗಳಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಸುಧಾರಣೆ ಹಂತ ಹಂತವಾಗಿ ನಡೆದಿದ್ದರಿಂದ ತೀವ್ರಗತಿಯಲ್ಲಿ ಅಭಿವೃದ್ಧಿ ಸಾಧಿಸುವುದು ಕಷ್ಟಕರವಾಗಿತ್ತು. ಕಾನೂನು ತೊಡಕು ಹಾಗೂ ಹಣಕಾಸಿನ ಕೊರತೆಯನ್ನು ಸಮತೋಲನದಿಂದ ನಿಭಾಯಿಸಿದಾಗಷ್ಟೇ ಅಭಿವೃದ್ಧಿ ಸಾಧ್ಯ.

Advertisement

ಈ ಬಾರಿಯ ಆಯವ್ಯಯದಲ್ಲಿ “ಆಪರೇಷನ್‌ ಗ್ರೀನ್‌’ ಮೂಲಕ ಮಹತ್ವದ ಕ್ಷೇತ್ರಗಳಾದ ಕೃಷಿ ಆಧಾರಿತ ಉದ್ಯೋಗ ಹಾಗೂ ಸೇವೆಗಳಿಗೆ ಮೀಸಲಿಟ್ಟಿರುವುದರಿಂದ ಕೃಷಿ ಕ್ಷೇತ್ರ ಮುಂಬರುವ ದಿನಗಳಲ್ಲಿ ಶೇ.5ರಷ್ಟು ವಾರ್ಷಿಕ ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. ಏಕೆಂದರೆ ರೈತರ ಸಾಲಕ್ಕೆ 11 ಲಕ್ಷ ಕೋಟಿ ರೂ. ಹಾಗೂ ಸುಮಾರು 50,000 ಕೋಟಿ ರೂ. ವೆಚ್ಚದಲ್ಲಿ ಹೈನುಗಾರಿಕೆ, ಮೀನುಗಾರಿಕೆ, ಕ್ಲಸ್ಟರ್‌ ಆಧಾರಿತ ಕೃಷಿ, ತೋಟಗಾರಿಕೆ ಹಾಗೂ ರಫ್ತು ಅಭಿವೃದ್ಧಿಗಾಗಿ ಮೀಸಲಿಟ್ಟಿರುವುದು ಉತ್ತಮವಾಗಿದೆ.

ಎಪಿಎಂಸಿ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಹಾಗೂ ಮೂಲ ಸೌಕರ್ಯ ಕಾರ್ಯಗಳಿಗೆ ಗಮನ ಹರಿಸುವುದು ಸೂಕ್ತವಾಗಿದೆ. ಸುಮಾರು 50 ಕೋಟಿ ಜನರಿಗೆ ಅನುಕೂಲವಾಗುವಂತೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಮಳೆ ಹಾಗೂ ಇತರೆ ಕ್ಷೇತ್ರಗಳಿಗೆ ಅನುದಾನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿರುವುದು ಕಂಡುಬಂದಿದೆ.

ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಿಎಸ್‌ಟಿ ಹಾಗೂ ನೋಟು ಅಮಾನ್ಯದ ಬಳಿಕ ಉದ್ಯಮಗಳ ಆರ್ಥಿಕತೆ ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಪಾರದರ್ಶಕತೆ ಬಂದಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಉದ್ಯಮ ಹಾಗೂ ಜನರ ನಡುವಿನ ಸರ್ಕಾರಿ ತೊಡಕುಗಳು ನಿವಾರಣೆಯಾಗಿವೆ. ಇದರಿಂದ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ದೇಶವು ಸುಮಾರು ಶೇ.7.5ರಷ್ಟು ಜಿಡಿಪಿ ಪ್ರಗತಿ ಸಾಧಿಸಲು ಬಜೆಟ್‌ ಸಹಾಯಕವಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಸಬ್‌ ಅರ್ಬನ್‌ ರೈಲು ಘೋಷಣೆ ಜತೆಗೆ ಹಲವು ಆಧುನೀಕರಣ ಯೋಜನೆಗಳನ್ನು ಘೋಷಿಸಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿವೆ. ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂ. ಅನುದಾನ ಒದಗಿಸಿರುವುದರಿಂದ ಆರ್ಥಿಕತೆಯಲ್ಲಿ ತ್ವರಿತ ಬೆಳವಣಿಗೆ ಕಾಣುತ್ತಿರುವ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನ ಪಡೆಯಲು ಅನುಕೂಲವಾಗಲಿದೆ. 

Advertisement

ಯುವಜನತೆಗೆ ಕೌಶಲ್ಯ ತರಬೇತಿ ಅಗತ್ಯವಿದ್ದು, ಪ್ರಗತಿಗೆ ಪೂರಕವಾದ ತಂತ್ರಜ್ಞಾನ ಅಳವಡಿಕೆಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಲು ಆದ್ಯತೆ ನೀಡಬೇಕು. ಜಾಗತಿಕ ಮಟ್ಟದ ಹಲವು ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದು, ಅದಕ್ಕೆ ಪೂರಕ ಕೌಶಲ್ಯ ತರಬೇತಿ ಒದಗಿಸಬೇಕಿದೆ. ವ್ಯಾಪಾರ, ವಾಣಿಜ್ಯ ವ್ಯವಹಾರದಲ್ಲಿ ಪಾದರ್ಶಕತೆ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಪ್ರಗತಿಗೆ ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ ಆರ್ಥಿಕ ಪ್ರಗತಿಯು ಶೇ.7.5ರ ಗುರಿ ತಲುಪಲು ಸಾಧ್ಯವಾಗುವ ನಿರೀಕ್ಷೆಯನ್ನು ಆಯವ್ಯಯ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next