Advertisement

ಪರೀಕ್ಷೆ ಸಿದ್ಧತೆಗೊಂದಿಷ್ಟು ಪೂರಕ ಸಲಹೆಗಳು

10:46 PM Feb 18, 2020 | mahesh |

ಪಿಯುಸಿ ಮತ್ತು ಮೆಟ್ರಿಕ್‌ ಪರೀಕ್ಷೆಗಳು ಆರಂಭವಾಗುವ ಸಮಯ ಇನ್ನೇನು ಹತ್ತಿರವಾಯಿತು. ಶೈಕ್ಷಣಿಕ ರಂಗದಲ್ಲಿ ಈ ಎರಡೂ ಪರೀಕ್ಷೆಗಳು ಮಹತ್ತರ ಪಾತ್ರವನ್ನು ಹೊಂದಿವೆ ಅಲ್ಲದೇ ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕುವುದೂ ಇದೇ ಎರಡು ಪರೀಕ್ಷೆಗಳು. ಪರೀಕ್ಷಾ ಮಂಡಳಿಯಿಂದ ನೇರವಾಗಿ ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಯುವ ಕಾರಣ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಮಟ್ಟಿಗೆ ಪರೀಕ್ಷಾ ಭಯ ಇರುವುದು ಸಾಮಾನ್ಯ. ಆದರೆ ಈ ಭಯ ಓದಿನ ಮೇಲೆ ಯಾವುದೇ ಪರಿಣಾಮ ಬೀರದಿರಲಿ. ಪರೀಕ್ಷೆಗಳಿಗೆ ಸರಿಯಾಗಿ ಮುಂಚಿತವಾಗಿಯೇ ತಯಾರಿ ಮಾಡಿಕೊಂಡರೆ ಪರೀಕ್ಷಾ ಭಯ ನಿಮ್ಮನ್ನು ಕಾಡುವುದಿಲ್ಲ. ಇದಕ್ಕೆ ಸತತ ಅಭ್ಯಾಸ ಅತ್ಯಗತ್ಯ. ಆದರೆ ಕೆಲವರಿಗೆ ಏಕಾಗ್ರತೆಯಿಂದ ಓದುವುದೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಓದಲು ಕುಳಿತ ಕೆಲವೇ ಸಮಯಕ್ಕೆ ಸಾಕೆನಿಸುತ್ತದೆ ಮತ್ತು ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತದೆ.

Advertisement

ಎಲ್ಲಿ ಕುಳಿತು ಓದಬೇಕು, ಹೊರಗಿನ ಗದ್ದಲ, ಮನೆಯಲ್ಲಿ ಟಿವಿ, ಹಾಡುಗಳಿಂದ ಉಂಟಾಗುವ
ಕಿರಿಕಿರಿ ಈ ಮುಂತಾದವುಗಳ ಸಮಸ್ಯೆಯಿಂದ ಮುಕ್ತವಾಗಿ ಶಾಂತ ಮನಸ್ಸಿನಿಂದ ಅಭ್ಯಾಸ ಮಾಡಲು ಪೂರಕ ವಾತಾವರಣ ಅಗತ್ಯ. ಹೀಗೆ ಉತ್ತಮ ಓದಿಗೆ ಸೂಕ್ತ ಸ್ಥಳ ಹೊಂದಿಸಿಕೊಳ್ಳಲು ಕೆಲವೊಂದು ಸೂಕ್ತ ಸಲಹೆಗಳು ಇಲ್ಲಿವೆ.

ಗ್ರಂಥಾಲಯ
ಗ್ರಂಥಾಲಯ ನಿಮಗೆ ಶಾಂತವಾಗಿ ಓದಿಕೊಳ್ಳಲು ಸೂಕ್ತ ಸ್ಥಳವಾಗಿದೆ. ಏಕೆಂದರೆ ಅಲ್ಲಿರುವ ಸ್ತಬ್ಧ ಮತ್ತು ಪ್ರಸನ್ನ ವಾತಾವರಣ ನಿಮ್ಮ ಏಕಾಗ್ರತೆಯನ್ನು ಉಳಿಸುತ್ತದೆ. ಸುತ್ತಲೂ ಓದುವವರೇ ಇರುವುದರಿಂದ ನಿಮಗೂ ಓದುವ ಆಸಕ್ತಿ ಕಡಿಮೆ ಆಗುವುದಿಲ್ಲ. ಬರೀ ಪರೀಕ್ಷಾ ಪಠ್ಯಗಳನ್ನೇ ಓದಿ ಓದಿ ಬೇಜಾರಾದಾಗ ಬೇರೆಯ ಪುಸ್ತಕಗಳನ್ನೂ ಓದಲು ಇಲ್ಲಿ ಅವಕಾಶವಿರುತ್ತದೆ.

ಇತರೆ ಸಲಹೆಗಳು
ಓದುವುದಕ್ಕೆ ಕುಳಿತುಕೊಳ್ಳುವ ಮೊದಲು ನಿಮ್ಮ ಓದಿಗೆ ಬೇಕಾದ ಪುಸ್ತಕಗಳು ಮತ್ತು ಇತೆರ ವಸ್ತುಗಳಾದ ಪೆನ್ನು, ಗಣಿತಕ್ಕೆ ಬೇಕಾದ ಸಾಮಗ್ರಿ ಹೀಗೆ ಎಲ್ಲವನ್ನು ನಿಮ್ಮ ಅನುಕೂಲಕ್ಕೆ ಸಿಗುವ ಹಾಗೆ ಇಟ್ಟುಕೊಳ್ಳಿ. ಇಲ್ಲವಾದರೆ ಅವುಗಳನ್ನು ತರಲು ಪದೇ ಪದೇ ನೀವು ಕುಳಿತ ಜಾಗದಿಂದ ಎದ್ದು ಹೋಗಬೇಕಾಗುತ್ತದೆ. ಒಂದು ಚಿಕ್ಕ ಡೈರಿಯಲ್ಲಿ ಟಿಪ್ಪಣಿ ಮಾಡಿಕೊಂಡು ಅದನ್ನು ಸದಾ ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಳ್ಳಿ. ಹೊರಗಡೆ ಹೋದಾಗ ಬಿಡುವಿನ ಸಮಯದಲ್ಲಿ ಒಮ್ಮೆ ಕಣ್ಣಾಡಿಸಿ. ನೀವು ಮಲಗುವ ಅಥವಾ ಓದುವ ಕೋಣೆಯಲ್ಲಿ ಪರೀಕ್ಷೆಗೆ ಮುಖ್ಯವಾದ ಉತ್ತರಗಳನ್ನು ಮತ್ತು ರೇಖಾಚಿತ್ರಗಳನ್ನು ಬಿಡಿಸಿ ನಿಮಗೆ ಕಾಣುವಂತೆ ಗೋಡೆಗೆ ಅಂಟಿಸಿ. ಇದರಿಂದ ಉತ್ತರಗಳನ್ನು ನಿಮ್ಮ ನೆನಪಿನಲ್ಲಿಡಲು ಸಾಧ್ಯವಾಗುತ್ತದೆ.

ಓದುವ ಸ್ಥಳ ಆರಾಮದಾಯಕ ವಾಗಿರಲಿ
ನೀವು ಓದಲು ಕುಳಿತುಕೊಳ್ಳುವಂತ ಜಾಗ ನಿಮಗೆ ಗಂಟೆಗಟ್ಟಲೆ ಕುಳಿತು ಓದಲು ಆರಾಮದಾಯಕ ವವಾಗಿರಲಿ. ಬೆನ್ನು ನೋವು ಕತ್ತು ನೋವು ಉಂಟು ಮಾಡುವಂತಿರಬಾರದು. ಸರಿಯಾದ ಗಾಳಿ ಬೆಳಕು ಬರುವಂಥ ಸ್ಥಳದಲ್ಲಿ ಕುಳಿತುಕೊಳ್ಳಿ. ಮತ್ತು ಓದಲು ಕುಳಿತಾಗ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಸಾಧ್ಯವಾದರೆ ಓದುವುದಕ್ಕೂ ಮೊದಲು ಸ್ವಲ್ಪ ಧ್ಯಾನ ಮಾಡಿ.

Advertisement

ಒಂದೇ ಕಡೆ ಕುಳಿತು ಓದಿ
ಪ್ರತೀ ದಿನವೂ ಒಂದೇ ಕಡೆ ಕುಳಿತು ಓದುವ ಹವ್ಯಾಸ ರೂಢಿಸಿಕೊಳ್ಳಿ. ಅದು ಮನೆ, ಕಾಲೇಜು ಗ್ರಂಥಾಲಯ, ಉದ್ಯಾನವನ, ವರ್ಗಕೋಣೆ ಯಾವುದೂ ಆಗಬಹುದು. ದಿನನಿತ್ಯ ಅಲ್ಲಿಯೇ ಅಭ್ಯಾಸ ಮಾಡುವುದು ಒಳಿತು. ಏಕೆಂದರೆ ನೀವು ಒಂದು ಸ್ಥಳಕ್ಕೆ ಮಾನಸಿಕವಾಗಿ ಹೊಂದಿಕೊಂಡರೆ ಅಲ್ಲಿ ನಿಮ್ಮ ಓದಿಗೆ ಭಂಗ ಉಂಟಾಗುವುದಿಲ್ಲ.

- ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next