ಸೀರೆ ಉಟ್ಟಿಲ್ಲ, ಧೋತಿ ಉಟ್ಟಿಲ್ಲ ಎಂಬ ಕಾರಣಕ್ಕೆ ದೇವಸ್ಥಾನದಿಂದ ಹೊರಗೆ ನಿಲ್ಲಿಸುವುದು ಅವಮಾನವೇ ಸರಿ. ಹೀಗಾಗಿ, ಅತಿಥಿಗಳಿಗೆ ದೇವಸ್ಥಾನದ ವತಿಯಿಂದ ಸಾಂಕೇತಿಕ ಮೌಲ್ಯ ಪಡೆದು ಸೀರೆ/ಪಂಚೆ ವ್ಯವಸ್ಥೆ ಮಾಡಿಕೊಡುವುದು ಒಳ್ಳೆಯದು.
ಸರಕಾರವು ಮುಜರಾಯಿ ಇಲಾಖೆಯ ಅಡಿ ಯಲ್ಲಿ ಬರುವ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರುವ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಕಳೆದ ತಿಂಗಳು ಹೊರ ಬಂದಿದೆ. ದೇವ ಸ್ಥಾನಗಳಿಗೆ ಭಕ್ತರು ಬರುತ್ತಾರೆ. ಆದರೆ ಭಕ್ತರಷ್ಟೇ ಬರುತ್ತಾರೆ ಎಂದು ತಿಳಿಯ ಬಾರದು. ಈಗ ಸರಕಾರವೂ ತನ್ನ ಸಿಬ್ಬಂದಿಗೆ ಶನಿವಾರ ಅದಿತ್ಯ ವಾರಗಳ, ಜೋಡಿ ಜೋಡಿ ವಾರದ ರಜೆಗಳನ್ನು ಕೊಡುತ್ತಿದೆ. ಇದು ಪ್ರವಾ ಸೋದ್ಯಮವನ್ನು ಪರ್ಯಾಯವಾಗಿ ಬೆಳಸುವ ವ್ಯವಸ್ಥೆಯೂ ಹೌದು. ಸಾಮಾನ್ಯವಾಗಿ ಪ್ರವಾಸಿಗರ ಆಯ್ಕೆ- ರೆಸಾರ್ಟ್, ಫಾಲ್ಸ್, ಬೀಚ್ ಇತ್ಯಾದಿಗಳೇ ಆಗಿರುತ್ತವೆ. ಆದರೆ ಅವರು ಇದರ ಜೊತೆಗೆ ದಾರಿಯಲ್ಲಿ ಸಿಗಬಹುದಾದ ಪುಣ್ಯ ಕ್ಷೇತ್ರಗಳಿಗೂ ಭೇಟಿಕೊಡುತ್ತಾರೆ. ಆ ಗಳಿಗೆಯಲ್ಲಿ ಪೂಜೆ ಮಾಡಿಸದಿದ್ದರೂ, ಹುಂಡಿಗಳಲ್ಲಿ ನೋಟ ಗಳನ್ನು ಹಾಕುವುದನ್ನು ಮರೆಯುವುದಿಲ್ಲ. ಹೀಗಾಗಿ ದೇವಸ್ಥಾನಕ್ಕೂ ಆದಾಯವಾಗುತ್ತದೆ. ದೇವಸ್ಥಾನ ಎಂದ ಮೇಲೆ ಅದಕ್ಕೊಂದು ಘನತೆ ಗಾಂಭೀರ್ಯ, ಸಂಹಿತೆ ಇರಬೇಕಾದದ್ದು ಸಹಜ ಎಂದು ಭಾವಿಸಿ, ಈ ನಿಟ್ಟಿನಲ್ಲಿ ನಡೆಯುವುದಾದರೆ, ದುಬೈ, ಅಬುಧಾಬಿ ಮಾದರಿಯನ್ನು ಅನುಸರಿಸುವುದು ಉತ್ತಮ ಮಾರ್ಗ.
ದುಬೈನಲ್ಲಿ “ಸಭ್ಯತೆಯಿಂದ ಇರಿ’ ಎಂಬ ಫಲಕಗಳು ಅಲ್ಲಲ್ಲಿ ಕಾಣುತ್ತಿರುತ್ತವೆ. ಅದು ಧಾಬಿಯಲ್ಲಿ ಒಂದು ಸುಂದರ ಹಾಗೂ ವಿಶಾಲ ಮಸೀದಿ ಇದೆ. ದಿನಕ್ಕೆ ಸಾವಿರಾರು ಜನ ಮುಸ್ಲಿ ಮರು, ಮುಸ್ಲಿಮೇತರರು ಅದನ್ನು ನೋಡಲು ಅಲ್ಲಿಗೆ ಬರುತ್ತಾರೆ. ಅಲ್ಲಿ ವಸ್ತ್ರ ಸಂಹಿತೆ ಇದೆ. ಮಹಿಳೆಯರು ದೇಹದ ಭಾಗಗಳು ಕಾಣದಂತಹ ಬಟ್ಟೆಗಳನ್ನು ಧರಿಸಿರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪೂರ್ಣವಾಗಿ ದೇಹವನ್ನು ಮುಚ್ಚುವುದರಿಂದಾಗಿ ಚೂಡಿದಾರಕ್ಕೆ ಅನುಮತಿ ಇದೆ. ಸೀರೆ ಇತ್ಯಾದಿಗಳಿಗೆ ನಿಷೇಧವಿದೆ. ಅದಕ್ಕಾಗಿ ಅಲ್ಲಿ ಮಸೀದಿಯ ವತಿಯಿಂದಲೇ ಬುರ್ಖಾಗಳನ್ನು ಒದಗಿಸುವ ವ್ಯವಸ್ಥೆಯಿದೆ. ಪ್ರವಾಸಿಗರು ತಮ್ಮಲ್ಲಿರುವ ಡ್ರೈವಿಂಗ್ ಲೈಸೆನ್ಸ್, ಕ್ರೆಡಿಟ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿಗಳಲ್ಲಿ ಒಂದನ್ನು ಅಡವಿಟ್ಟು ಬುರ್ಖಾ ಧರಿಸಿ ಮಸೀದಿ ಪ್ರವೇಶಿಸಬಹುದು. ಮಸೀದಿ ಪ್ರವೇಶಿಸಲು ನನ್ನ ಮಡದಿಯೂ ಬುರ್ಖಾ ಧಾರಿಯಾಗಿದ್ದಳು.
ಸೀರೆ ಉಟ್ಟಿಲ್ಲ, ಧೋತಿ ಉಟ್ಟಿಲ್ಲ ಎಂಬ ಕಾರ ಣಕ್ಕೆ ದೇವಸ್ಥಾನದಿಂದ ಒಬ್ಬನನ್ನು/ಳನ್ನು ಹೊರಗೆ ನಿಲ್ಲಿಸುವುದು ಅತಿಥಿಗೆ ಮಾಡುವ ಅವಮಾನವೇ ಸರಿ. ಇದೂ ಪಂಕ್ತಿಬೇಧಕ್ಕೆ ಸಮನಾದದ್ದು. ಹೀಗಾಗಿ, ಅತಿಥಿಗಳಿಗೆ, ದೇವಸ್ಥಾನದ ವತಿಯಿಂದ ಸಾಂಕೇತಿಕ ಮೌಲ್ಯ ಪಡೆದು ಸೀರೆ/ಪಂಚೆಗಳಿಗೆ ಒಂದು ವ್ಯವಸ್ಥೆ ಮಾಡಿಕೊಡುವುದು ಒಳ್ಳೆಯದು. ಜೊತೆಗೆ, ಪ್ಯಾಂಟ್ ಬರ್ಮುಡಾವನ್ನು ಕಳಚದೇ ಅವುಗಳ ಮೇಲೆಯೇ ಪಂಚೆ/ಸೀರೆಗಳನ್ನು ಸುತ್ತಿಕೊಳ್ಳಲು ಅನುವು ಮಾಡಿಕೊಟ್ಟರೆ ಇನ್ನೂ ಒಳ್ಳೆಯದಲ್ಲವೇ?
– ಡಾ| ಈಶ್ವರ ಶಾಸ್ತ್ರಿ ಮೋಟಿನಸರ